ಸಾರಾಂಶ
ನವದೆಹಲಿ : ‘ಮತಕಳ್ಳತನ ಮಾಡಿದ ಬಳಿಕ ಇದೀಗ ಬಿಜೆಪಿ, ತನ್ನ ವಿರೋಧಿ ಸರ್ಕಾರಗಳನ್ನು 30 ದಿನಗಳಲ್ಲಿ ಉರುಳಿಸಲು ಅಧಿಕಾರ ಕಳ್ಳತನಕ್ಕೆ (ಸತ್ತಾ ಚೋರಿ) ಕಾಯ್ದೆ ತಂದಿದೆ‘ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿವೇಶನದಲ್ಲಿ ಮಂಡಿಸಿದ ಮಂತ್ರಿಗಳು 30 ದಿನ ಜೈಲಿನಲ್ಲಿದ್ದರೆ ಅವರನ್ನು ವಜಾಗೊಳಿಸುವ ಮಸೂದೆಯನ್ನು ತರಾಟೆಗೆ ತೆಗೆದುಕೊಂಡರು.
‘ಈ ಕಾನೂನು ನಾಗರಿಕರು ಚುನಾಯಿತ ಸರ್ಕಾರವನ್ನು ತೆಗೆದುಹಾಕುವ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಆ ಅಧಿಕಾರವನ್ನು ಇ.ಡಿ. ಸಿಬಿಐನಂತಹ ಸಂಸ್ಥೆಗಳಿಗೆ ನೀಡುತ್ತದೆ. ಇದು ಪ್ರಜಾಪ್ರಭುತ್ವದ ಮೇಲೆ ಬುಲ್ಡೋಜರ್ ಓಡಿಸುವ ರೀತಿಯಿದೆ’ ಎಂದು ವಾಗ್ದಾಳಿ ನಡೆಸಿದರು.
ಬಿಹಾರ ಮತಪಟ್ಟಿ ಪರಿಷ್ಕರಣೆ: ಶೇ.98ರಷ್ಟು ದಾಖಲೆ ಸ್ವೀಕಾರ
ನವದೆಹಲಿ: ಬಿಹಾರ ಮತಪಟ್ಟಿ ಪರಿಷ್ಕರಣೆಯ ಭಾಗವಾಗಿ ಪ್ರಕಟಿಸಿರುವ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇನ್ನು 8 ದಿನಗಳು ಬಾಕಿ ಇದೆ. ಇದರ ನಡುವೆ ಈವರೆಗೆ ಶೇ.98.2 ರಷ್ಟು ಮತದಾರರ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.ಈ ಹಿನ್ನೆಲೆಯಲ್ಲಿ ಜೂ.24 ರಿಂದ ಆ.24ರ ತನಕ ಅವಧಿಯಲ್ಲಿ ನಿತ್ಯ ಶೇ.1.64 ಸರಾಸರಿಯಲ್ಲಿ ಶೇ.98.2ರಷ್ಟು ಮಂದಿ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ. ಸಲ್ಲಿಕೆಗೆ ಸೆ.1 ಕಡೆಯ ದಿನ. ಅಂತಿಮ ದಿನಕ್ಕೆ ಇನ್ನು 8 ದಿನ ಉಳಿದಿದ್ದು ಶೇ.1.8ರಷ್ಟು ಮತದಾರರು ದಾಖಲೆ ಸಲ್ಲಿಸುವುದು ಬಾಕಿಯಿದೆ.
ಆಕ್ಷೇಪಣೆಯ ಸಂದರ್ಭದಲ್ಲಿ ಆಯೋಗ ಕರಡುಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸುವುದು ಮಾತ್ರವಲ್ಲದೇ ಮತದಾರರು ಈ ಹಿಂದೆ ಒದಗಿಸದ ದಾಖಲೆಗಳನ್ನು ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ.