ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ನೇಮಕ

| Published : Sep 22 2024, 01:49 AM IST / Updated: Sep 22 2024, 05:09 AM IST

ಸಾರಾಂಶ

ಏರ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಸೆ.30ರಂದು ಅಧಿಕಾರ ವಹಿಸಿಕೊಳ್ಳಲಿರುವ ಅವರು ಹೊಸ ಯುದ್ಧ ವಿಮಾನಗಳ ಸಂಗ್ರಹಣೆ ಮತ್ತು ಚೀನಾದೊಂದಿಗಿನ ಗಡಿ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ಕಾರ್ಯಸೂಚಿ ರಚಿಸುವ ನಿರೀಕ್ಷೆಯಿದೆ.

ನವದೆಹಲಿ: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿರುವ ಸಿಂಗ್‌ ಸೆ.30ರಂದು ಹಾಲಿ ಮುಖ್ಯಸ್ಥ ವಿ.ಆರ್‌. ಚೌಧರಿಯವರ ನಿವೃತ್ತಿಯ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮುಖ್ಯಸ್ಥರಾದ ಬಳಿಕ ಇವರು ಹೊಸ ಯುದ್ಧ ವಿಮಾನಗಳ ಸಂಗ್ರಹಣೆ, ಚೀನಾದೊಂದಿಗೆ ಗಡಿ ನಿಯಂತ್ರಣ ರೇಖೆಯಲ್ಲಿನ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ಕಾರ್ಯಸೂಚಿ ರಚನೆಯತ್ತ ಗಮನ ಹರಿಸುವ ಸಾಧ್ಯತೆಯಿದೆ.

1984ರಲ್ಲಿ ವಾಯುಪಡೆಗೆ ಸೇರ್ಪಡೆಯಾದ ಸಿಂಗ್‌ 5,000 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದಾರೆ. ಈ ವರ್ಷ ಭಾರತದಲ್ಲಿ ಮೊದಲ ಬಾರಿ ನಡೆದ ಬಹುರಾಷ್ಟ್ರೀಯ ವಾಯು ವ್ಯಾಯಾಮ ‘ತರಂಗ್‌ ಶಕ್ತಿ’ಯ ಆಯೋಜನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಂಗ್‌ ಪರಮ ವಿಶಿಷ್ಟ ಸೇವಾ ಪದಕ ಮತ್ತು ಅತಿ ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿದ್ದಾರೆ.