ಸಾರಾಂಶ
ಸ್ಪೇನ್‌ನ ಯುವ ಟೆನಿಸಿಗ ಕಾರ್ಲೋಸ್ ಆಲ್ಕರಜ್ ಸತತ 3ನೇ ಬಾರಿಗೆ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದು, ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಲಂಡನ್: ಸ್ಪೇನ್‌ನ ಯುವ ಟೆನಿಸಿಗ ಕಾರ್ಲೋಸ್ ಆಲ್ಕರಜ್ ಸತತ 3ನೇ ಬಾರಿಗೆ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದು, ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಆಲ್ಕರಜ್, 5ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ 6-4, 5-7, 6-3, 7-6 (8/6) ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು.
ನಿರೀಕ್ಷೆಯಂತೆಯೇ ಆಲ್ಕರಜ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದರು. ಮೊದಲ ಸೆಟ್ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡ 22 ವರ್ಷದ ಸ್ಪೇನ್ ಸೇನಾನಿಗೆ, 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಸೆಟ್ ಕೈತಪ್ಪಿದ ಹೊರತಾಗಿಯೂ ಧೃತಿಗೆಡದ ಆಲ್ಕರಜ್, ಮುಂದಿನ 2 ಸೆಟ್‌ಗಳನ್ನು ತಮ್ಮದಾಗಿಸಿಕೊಂಡು ಪಂದ್ಯ ಜಯಿಸಿದರು. 4ನೇ ಸೆಟ್ ಟೈ ಬ್ರೇಕರ್‌ನಲ್ಲಿ ನಿರ್ಧಾರವಾಯಿತು. 2023, 2024ರಲ್ಲಿ ಚಾಂಪಿಯನ್ ಆಗಿದ್ದ ಆಲ್ಕರಜ್, ವಿಂಬಲ್ಡನ್‌ನಲ್ಲಿ ಸತತ 20 ಪಂದ್ಯಗಳನ್ನು ಗೆದ್ದಿದ್ದು, ಅವರು ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಂದು ಫೈನಲ್‌ನಲ್ಲಿ
ಇಗಾ vs ಅಮಾಂಡ
ಮಹಿಳಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಶನಿವಾರ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಹಾಗೂ ಅಮೆರಿಕದ ಅಮಾಂಡ ಅನಿಸಿಮೊವಾ ಸೆಣಸಲಿದ್ದಾರೆ. ಈ ಬಾರಿ ಯಾರೇ ಚಾಂಪಿಯನ್ ಆದರೂ, ವಿಂಬಲ್ಡನ್‌ನಲ್ಲಿ ಸತತ 8ನೇ ವರ್ಷ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್ ಉದಯಿಸಿದಂತಾಗುತ್ತದೆ. 5 ಗ್ರ್ಯಾನ್ ಸ್ಲಾಂ ವಿಜೇತೆ ಸ್ವಿಯಾಟೆಕ್, ಚೊಚ್ಚಲ ವಿಂಬಲ್ಡನ್ ಗೆಲ್ಲುವ ಗುರಿ ಹೊಂದಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್‌ಗೇರಿರುವ ಅಮಾಂಡ, ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದಾರೆ. ವಿಶೇಷವೆಂದರೆ ಈ ಇಬ್ಬರು ಆಟಗಾರ್ತಿಯರು ಇದೇ ಮೊದಲ ಬಾರಿಗೆ ಪರಸ್ಪರ ಸೆಣಸಲಿದ್ದಾರೆ. 34.75 ಕೋಟಿ ರು.
ಚಾಂಪಿಯನ್ ಆಗುವ ಆಟಗಾರ್ತಿಗೆ ಬರೋಬ್ಬರಿ 30 ಲಕ್ಷ ಪೌಂಡ್ (ಅಂದಾಜು 34.75 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. 17.61 ಕೋಟಿ ರು.
ರನ್ನರ್ ಅಪ್ ಆಗುವ ಆಟಗಾರ್ತಿಗೆ 15.2 ಲಕ್ಷ ಪೌಂಡ್ (ಅಂದಾಜು 17.61 ಕೋಟಿ ರು.) ಬಹುಮಾನ ಮೊತ್ತ ದೊರೆಯಲಿದೆ.