ಸಾರಾಂಶ
ಇಸ್ಲಾಮಾಬಾದ್: ಭಾರತದ ಜೊತೆ ಸಂಧಾನಕ್ಕೆ ಡೊನಾಲ್ಡ್ ಟ್ರಂಪ್‌ರನ್ನು ಗೋಗರೆದಿದ್ದ ಪಾಕ್ ಇದೀಗ ಅಮೆರಿಕವನ್ನೇ ಟೀಕಿಸಿದ್ದು ‘ಅಮೆರಿಕವು ಜಾಗತಿಕ ಸಂಘರ್ಷದಿಂದ ಲಾಭ ಗಳಿಸುತ್ತಿದೆ’ ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಇದು ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ.
ಖ್ವಾಜಾ ನೀಡಿರುವ ಹೇಳಿಕೆ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕವು ಶಸ್ತ್ರಾಸ್ತ್ರ ಉದ್ಯಮಕ್ಕೆ ಲಾಭವಾಗುವಂತೆ ಜಾಗತಿಕ ಸಂಘರ್ಷಗಳಿಗೆ ಉದ್ದೇಶಪೂರ್ವಕವಾಗಿ ಉತ್ತೇಜನ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ‘ ಕಳೆದ 100 ವರ್ಷಗಳಲ್ಲಿ ಅಮೆರಿಕನ್ನರು ಹಲವು ಯುದ್ಧಗಳನ್ನು ಸೃಷ್ಟಿಸಿದ್ದಾರೆ. ಅವರು 260 ಯುದ್ಧಗಳನ್ನು ಮಾಡಿದ್ದಾರೆ. ಚೀನಾ ಕೇವಲ 3 ಯುದ್ಧದಲ್ಲಿ ತೊಡಗಿಸಿಕೊಂಡಿದೆ. ಆದರೂ ಅಮೆರಿಕ ಹಣಗಳಿಸುತ್ತಿದೆ. ಅವರ ಮಿಲಿಟರಿ ಉದ್ಯಮ ದೊಡ್ಡದಾಗಿದ್ದು, ಜಿಡಿಪಿಯ ಪ್ರಮುಖ ಭಾಗ ಅದಕ್ಕಾಗಿಯೇ ಸಂಘರ್ಷ ಸೃಷ್ಟಿಸುತ್ತಿದ್ದಾರೆ’ ಎಂದಿದ್ದಾರೆ.
ಮುಂದುವರೆದಂತೆ ‘ಸಿರಿಯಾ, ಈಜಿಪ್ಟ್, ಅಪ್ಘಾನಿಸ್ತಾನ ಮತ್ತು ಲಿಬಿಯಾದಂತಹ ದೇಶಗಳು ಒಂದು ಕಾಲದಲ್ಲಿ ಶ್ರೀಮಂತವಾಗಿದ್ದವು. ಆದರೆ ಯುದ್ಧದಿಂದ ದಿವಾಳಿಯಾಗಿವೆ. ಅಮೆರಿಕದ ಒಳಗೊಳ್ಳುವಿಕೆ ಅವುಗಳ ಪತನಕ್ಕೆ ಕಾರಣ’ಎಂದಿದ್ದಾರೆ.
ಖ್ವಾಜಾ ವಿವಾದಾತ್ಮಕ ಹೇಳಿಕೆ ನೀಡುತ್ತಿ ರುವುದು ಇದೇ ಮೊದಲೇನಲ್ಲ. ಭಾರತದಿಂದ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾದರೆ ಅಣ್ವಸ್ತ್ರ ದಾಳಿಯ ಬೆದರಿಕೆ ಹಾಕಿದ್ದರು. ಮಾತ್ರವಲ್ಲದೇ ಕಳೆದ 30 ವರ್ಷಗಳಲ್ಲಿ ಅಮೆರಿಕಕ್ಕಾಗಿ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿರುವುದಾಗಿ ಜಾಗತಿಕ ವೇದಿಕೆಯಲ್ಲಿ ಒಪ್ಪಿಕೊಂಡಿದ್ದರು. ಜೊತೆಗೆ ಭಾರತದ ಮೇಲೆ ಪಾಕ್ ದಾಳಿಗೆ ಸಾಕ್ಷ್ಯ ಕೊಡಿ ಎಂದರೆ ಸಾಮಾಜಿಕ ಜಾಲತಾಣ ನೋಡಿ ಎಂದಿದ್ದರು.