ಸಾರಾಂಶ
ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಬಾಂಡ್ ವಿಷಯದಲ್ಲಿ ಪ್ರಶ್ನಿಸಿದ್ದಾರೆ.
ನವದೆಹಲಿ: ಚುನಾವಣಾ ಬಾಂಡ್ ವಿಷಯದಲ್ಲಿ ಬಿಜೆಪಿಯವರು ಸುಲಿಗೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸುವುದಾದರೆ ಅವರ ಕಾಂಗ್ರೆಸ್ ಪಕ್ಷವೂ ಸುಲಿಗೆ ಮಾಡಿ ಚುನಾವಣಾ ಬಾಂಡ್ ಮೂಲಕ ಹಣ ಪಡೆದಿರಬೇಕಲ್ಲವೇ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ‘ಕಾಂಗ್ರೆಸ್ ನಾಯಕರು ಬಿಜೆಪಿಯು ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಿ ಹಣ ಪಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ ಅವರು ನಮಗಿಂತ ಕಡಿಮೆ ಸಂಸದರನ್ನೂ ಹೊಂದಿದ್ದರೂ ಪ್ರಮಾಣದಲ್ಲಿ ನಮಗಿಂತ ಹೆಚ್ಚಿನ ಹಣವನ್ನು ಚುನಾವಣಾ ಬಾಂಡ್ ಮೂಲಕ ಪಡೆದಿದ್ದಾರೆ. ಹಾಗಾದರೆ ಅವರು ಮಾಡಿರುವುದೂ ಸುಲಿಗೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.ಎಸ್‌ಬಿಐ ಸಲ್ಲಿಸಿರುವ ಮಾಹಿತಿಯಂತೆ ಬಿಜೆಪಿಯು 303 ಸಂಸದರಿದ್ದಾಗ್ಯೂ 6,986.5 ಕೋಟಿ ರು. ಚುನಾವಣಾ ಬಾಂಡ್ ದೇಣಿಗೆ ಪಡೆದಿದೆ. ಆದರೆ ಕಾಂಗ್ರೆಸ್‌ನಲ್ಲಿ ಕೇವಲ 44 ಸಂಸದರಿದ್ದಾಗ್ಯೂ ಬರೋಬ್ಬರಿ 1334 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್ ದೇಣಿಗೆಯನ್ನು ಪಡೆದಿದೆ.