ಸಾರಾಂಶ
ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂಬುದಾಗಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ.
ತಿರುವನಂತಪುರಂ: ರಾಜ್ಯದ ಪಶುವೈದ್ಯಕೀಯ ಆಸ್ಪತ್ರೆಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಉಪಕುಲಪತಿ ಡಾ। ಶಶೀಂದ್ರನಾಥ್‌ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಹೊರಡಿಸಿದ ಆದೇಶದಲ್ಲಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಶಶೀಂದ್ರನಾಥ್ ಅವರು ನನಗೆ ಫೆ.28 ರಂದು ನೀಡಿರುವ ಉತ್ತರದಲ್ಲಿ ಅವರ ನಿರ್ಲಕ್ಷ್ಯ ಧೋರಣೆ ಎದ್ದು ತೋರುತ್ತದೆ. ಈ ಹಿನ್ನೆಲೆಯಲ್ಲಿ ಅವರನ್ನು ಈ ಕೂಡಲೇ ಅಮಾನತು ಮಾಡಿ ಹಾಲಿ ಇಲ್ಲವೇ ನಿವೃತ್ತ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆಗೆ ಆದೇಶಿಸುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.ಫೆ.18ರಂದು ಪಶುವೈದ್ಯಕೀಯ ವಿದ್ಯಾರ್ಥಿ ಸಿದ್ಧಾರ್ಥನ್ ತಮ್ಮ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಸಂಬಂಧ ಪೊಲೀಸರು ಇದುವರೆಗೆ 11 ಮಂದಿಯನ್ನು ಬಂಧಿಸಿದ್ದಾರೆ.