ಸುಗಮ ಅಮರನಾಥ ಯಾತ್ರೆಗೆ ಸೇನೆಯಿಂದ ಆಪರೇಷನ್‌ ಶಿವ ಶುರು

| N/A | Published : Jul 13 2025, 01:18 AM IST / Updated: Jul 13 2025, 05:17 AM IST

ಸಾರಾಂಶ

ಅಮರನಾಥ ಯಾತ್ರೆ ಸುಗಮವಾಗಿ ನಡೆಸುವ ಸಲುವಾಗಿ ಭಾರತೀಯ ಸೇನೆಯು ‘ಆಪರೇಷನ್‌ ಶಿವ’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರಡಿಯಲ್ಲಿ ಸುರಕ್ಷತೆಗಾಗಿ ಸೇನೆಯು 8500 ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ.

ನವದೆಹಲಿ: ಅಮರನಾಥ ಯಾತ್ರೆ ಸುಗಮವಾಗಿ ನಡೆಸುವ ಸಲುವಾಗಿ ಭಾರತೀಯ ಸೇನೆಯು ‘ಆಪರೇಷನ್‌ ಶಿವ’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರಡಿಯಲ್ಲಿ ಸುರಕ್ಷತೆಗಾಗಿ ಸೇನೆಯು 8500 ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ. ಇದರ ಜತೆಗೆ ವಾಯುದಾಳಿಯನ್ನು ನಿಯಂತ್ರಿಸುವ ವ್ಯವಸ್ಥೆ, ವಿದ್ಯುನ್ಮಾನ ಶಸ್ತ್ರಾಸ್ತ್ರಗಳು ಸೇರಿ ಅನೇಕ ಸಿದ್ಧತೆ ಕೈಗೊಂಡಿದೆ

 ಇದಿಷ್ಟೇ ಅಲ್ಲದೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ 150 ವೈದ್ಯರು, 2 ಅತ್ಯಾಧುನಿಕ ಡೆಸ್ಸಿಂಗ್‌ ರೂಂಗಳು, 9 ಮೆಡಿಕಲ್‌ ಏಡ್‌ ಕೇಂದ್ರಗಳು, 100 ಹಾಸಿಗೆ ಉಳ್ಳ ಆಸ್ಪತ್ರೆ, 2 ಲಕ್ಷ ಲೀಟರ್‌ ಸಾಮರ್ಥ್ಯದ 26 ಆಮ್ಲಜನಕ ಬೂತ್‌ಗಳನ್ನು ತೆರೆಯಲಾಗಿದೆ. ಜತೆಗೆ ಪ್ರಾಕೃತಿಕ ವಿಕೋಪ ಎದುರಿಸಲು ಎಸ್ಕವೇಟರ್‌ಗಳು ಸೇರಿ ತುರ್ತು ಸ್ಪಂದನಾ ಪಡೆಗಳನ್ನು ನಿಯೋಜಿಸಲಾಗಿದೆ.

ದಿಲ್ಲಿ: 4 ಮಹಡಿ ಕುಸಿತ, 2 ವರ್ಷದ ಮಗು ಸೇರಿ 6 ಬಲಿ, 8 ಜನಕ್ಕೆ ಗಾಯ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿ 4 ಮಹಡಿಯ ಕಟ್ಟಡವೊಂದು ಕುಸಿದು 6 ಜನರು ಮೃತಪಟ್ಟಿದ್ದು, 8 ಜನರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಈಶಾನ್ಯ ದೆಹಲಿಯ ಈದ್ಗಾ ಬಳಿ ದುರ್ಘಟನೆ ಸಂಭವಿಸಿದೆ.

 ಬೆಳಗ್ಗೆ 7 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿದ್ದು, ಕಟ್ಟಡ ಕುಸಿದು ಬಿದ್ದಿದೆ. ಇದರಿಂದಾಗಿ ಕಟ್ಟಡ ಮಾಲೀಕ ಸೇರಿ ಅವರ ಕುಟುಂಬದ ಆರು ಜನರು ಅಸುನೀಗಿದ್ದಾರೆ. ಅವರ ಹಿರಿಯ ಪುತ್ರ ಮತ್ತು ಪತ್ನಿ, ಅವರ 1 ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಟ್ಟಡ ಕುಸಿದ ರಭಸಕ್ಕೆ ಎದುರು ಕಟ್ಟಡಲ್ಲಿದ್ದವರಿಗೂ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ವಿಪತ್ತು ನಿರ್ವಹಣಾ ಪಡೆ ರಕ್ಷಣೆ ಕಾರ್ಯ ಮಾಡುತ್ತಿದೆ.

ಕಾಶ್ಮೀರದ ವೂಲರ್‌ ಕೆರೆ ಮೇಲೆ 3 ದಶಕದ ಬಳಿಕ ಅರಳಿದ ಕಮಲ ಹೂವು

ಬಂಡಿಪೋರಾ (ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದಲ್ಲಿರುವ ಏಷ್ಯಾದ 2ನೇ ಅತಿ ದೊಡ್ಡ ಸಿಹಿ ನೀರಿನ ಸರೋವರ ವೂಲರ್‌ ಕೆರೆಯಲ್ಲಿ 30 ವರ್ಷಗಳ ಬಳಿಕ ಮತ್ತೆ ತಾವರೆ ಹೂವುಗಳು ಅರಳಿವೆ. 1992ರ ಭೀಕರ ಪ್ರವಾಹದ ಬಳಿಕ ನಶಿಸಿಹೋಗಿದ್ದ ಕಮಲ ಮತ್ತೆ ಅರಳಿರುವುದು ಸ್ಥಳೀಯರಲ್ಲಿ ಖುಷಿಯನ್ನುಂಟು ಮಾಡಿದೆ. 

ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ವೂಲರ್‌ ಕೆರೆಯು ಏಷ್ಯಾದ 2ನೇ ಅತಿ ದೊಡ್ಡ ಸಿಹಿ ನೀರಿನ ಕೊಳವಾಗಿದ್ದು, 24 ಕಿ.ಮೀ ಸುತ್ತಳತೆ ಹೊಂದಿದೆ. 1992ರಲ್ಲಿ ಭೀಕರ ಪ್ರವಾಹ ಸಂಭವಿಸಿ, ಅಪಾರ ಪ್ರಮಾಣದಲ್ಲಿ ಹೂಳು ಕೆರೆ ಸೇರಿತ್ತು. ಇದರಿಂದಾಗಿ ಅಲ್ಲಿನ ತಾವರೆಗಳು ಸಂಪೂರ್ಣವಾಗಿ ನಶಿಸಿಹೋಗಿದ್ದವು. ಬಳಿಕ ವೂಲರ್‌ ಸಂರಕ್ಷಣಾ ಮತ್ತು ನಿರ್ವಹಣೆ ಪ್ರಾಧಿಕಾರದ ಮುಂದಾಳತ್ವದಲ್ಲಿ ಹೂಳು ತೆಗೆಯುವಿಕೆ ಮತ್ತು ತಾವರೆ ಬೀಜ ಸಿಂಪಡಣೆಯಿಂದಾಗಿ 30 ವರ್ಷಗಳ ಬಳಿಕ ವೂಲಾರ್‌ ಕೆರೆಯಲ್ಲಿ ಮತ್ತೆ ಕಮಲ ಅರಳಿದೆ.

ನಮೀಬಿಯಾದಿಂದ ತಂದಿದ್ದ 8 ವರ್ಷದ ಚೀತಾ ನಭಾ ಗಾಯಕ್ಕೆ ತುತ್ತಾಗಿ ಸಾವು

ಶಿಯೋಪುರ್ (ಮಧ್ಯಪ್ರದೇಶ): ಆಫ್ರಿಕಾದ ನಮೀಬಿಯಾದಿಂದ ಇಲ್ಲಿಯ ಕುನೋ ರಾಷ್ಟ್ರೀಯ ಉದ್ಯಾನಕ್ಕೆ (ಕೆಎನ್‌ಪಿ) ಸ್ಥಳಾಂತರಗೊಂಡಿದ್ದ 8 ವರ್ಷದ ಹೆಣ್ಣು ಚೀತಾ ನಭಾ ತೀವ್ರ ಗಾಯದಿಂದ ಶನಿವಾರ ಮೃತಪಟ್ಟಿದೆ. ‘ವಾರದ ಹಿಂದೆ ಚೀತಾಗಳಿದ್ದ ಆವರಣದಲ್ಲಿ ಬಹುಶಃ ಬೇಟೆಯಾಡುವ ಪ್ರಯತ್ನವೊಂದರಲ್ಲಿ ನಭಾಗೆ ಗಂಭೀರ ಗಾಯಗಳಾಗಿವೆ. ಎಡಗಡೆಯ ಕಾಲುಗಳ ಮೂಳೆಗಳಿಗೆ ಪೆಟ್ಟಾಗಿದೆ. ನಭಾ ಚಿಕಿತ್ಸೆ ಪಡೆಯುತ್ತಿದ್ದಳು. 

ಆದರೆ ಗಂಭೀರ ಗಾಯಗಳು ಆಕೆಯನ್ನು ಬಲಿ ಪಡೆದಿವೆ. ಮರಣೋತ್ತರ ಪರೀಕ್ಷೆ ನಂತರ ಇತರ ಮಾಹಿತಿ ತಿಳಿಯಲಿದೆ’ ಎಂದು ಚೀತಾ ಯೋಜನೆಯ ಕ್ಷೇತ್ರ ನಿರ್ದೇಶಕ ಉತ್ತಮ್‌ ಶರ್ಮಾ ತಿಳಿಸಿದ್ದಾರೆ. ನಭಾ ಸಾವಿನ ನಂತರ ಕುನೋದಲ್ಲಿ ಈಗ 26 ಚೀತಾಗಳಿವೆ.

Read more Articles on