ಜೈಲಿನಲ್ಲೇ ಕೇಜ್ರಿವಾಲ್ ಹತ್ಯೆಗೆ ಸಂಚು: ಆಪ್‌ ಗಂಭೀರ ಆರೋಪ

| Published : Apr 19 2024, 01:08 AM IST / Updated: Apr 19 2024, 05:52 AM IST

ಜೈಲಿನಲ್ಲೇ ಕೇಜ್ರಿವಾಲ್ ಹತ್ಯೆಗೆ ಸಂಚು: ಆಪ್‌ ಗಂಭೀರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಮೇಹ 300 ದಾಟಿದೆ, ಆದರೂ ಇನ್ಸುಲಿನ್‌ ನೀಡುತ್ತಿಲ್ಲ ಎಂದು ಆಪ್‌ ನಾಯಕಿ ಅತಿಷಿ ಆರೋಪಿಸಿದ್ದಾರೆ.

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಹತ್ಯೆಗೆ ದೊಡ್ಡ ಸಂಚು ರೂಪಿಸಲಾಗಿದೆ ಎಂದು ಆಮ್‌ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ಮಧುಮೇಹದಿಂದ ಬಳಲುತ್ತಿದ್ದರೂ ಕೇಜ್ರಿವಾಲ್‌ ಜೈಲಲ್ಲಿ ಸಿಹಿ ತಿನಿಸು ಸೇವಿಸುತ್ತಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಬಾರದು ಎಂದು ಜಾರಿ ನಿರ್ದೇಶನಾಲಯ ಗುರುವಾರ ಕೋರ್ಟ್‌ಗೆ ಮನವಿ ಮಾಡಿತ್ತು.

ಅದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಆಪ್‌ ಸರ್ಕಾರದ ಸಚಿವ ಅತಿಷಿ, ‘ಕೇಜ್ರಿವಾಲ್‌ ಆಹಾರ ಸೇವನೆ ಕುರಿತು ಇ.ಡಿ.ಅಧಿಕಾರಿಗಳು ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಕೇಜ್ರಿವಾಲ್‌ ಅವರ ರಕ್ತದಲ್ಲಿನ ಸಕ್ಕರೆ ಅಂಶ 300 ದಾಟಿದೆ. ಹೀಗಾಗಿ ಇನ್ಸುಲಿನ್‌ ನೀಡುವಂತೆ ಕೋರಿಕೆ ಸಲ್ಲಿಸಿದರೂ ಅಧಿಕಾರಿಗಳು ಅದಕ್ಕೆ ಅನುಮತಿ ನೀಡುತ್ತಿಲ್ಲ. ಜೊತೆಗೆ ಮನೆಯಲ್ಲಿ ಸಿದ್ಧಪಡಿಸಿದ ಆಹಾರ ನೀಡಲೂ ಅವಕಾಶ ನೀಡುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಜೈಲಿನಲ್ಲೇ ಕೇಜ್ರಿವಾಲ್‌ ಅವರನ್ನು ಕೊಲ್ಲಲು ದೊಡ್ಡ ಪಿತೂರಿ ರೂಪಿಸಿದಂತಿದೆ’ ಎಂದು ಆರೋಪಿಸಿದರು.

ಬಿಜೆಪಿ ಅಡಿಯಾಳಾಗಿರುವ ಇ.ಡಿ., ಕೇಜ್ರಿವಾಲ್‌ ಅವರು ಬಾಳೆಹಣ್ಣು, ಮಾವಿನ ಹಣ್ಣು ಮತ್ತು ಹೆಚ್ಚಾಗಿ ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದಾರೆ ಎಂದ ಕೋರ್ಟಿಗೆ ಸುಳ್ಳು ಹೇಳಿದೆ. ಯಾರಾದರೂ ಸಕ್ಕರೆ ಕಾಯಿಲೆ ಇದ್ದವರೂ ಸಿಹಿ ಪದಾರ್ಥ ತಿನ್ನಲು ಸಾಧ್ಯವೇ? ತನ್ನ ಘಟಕವಾಗಿರುವ ಇ.ಡಿ. ಮೂಲಕ ಕೇಜ್ರಿವಾಲ್‌ ಅವರಿಗೆ ಹಾನಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅತಿಷಿ ಆರೋಪಿಸಿದರು.

ಸಕ್ಕರೆ ಅಂಶ ದಿಢೀರ್‌ ಕಡಿಮೆಯಾದರೆ ಎಂಬ ಕಾರಣಕ್ಕೆ ಮಧುಮೇಹಿಗಳಿಗೆ ಬಾಳೆಹಣ್ಣು ಅಥವಾ ಚಾಕಲೆಟ್‌ ಇಟ್ಟುಕೊಳ್ಳಲು ವೈದ್ಯರೇ ಸೂಚಿಸುತ್ತಾರೆ. ಇನ್ನು ನವರಾತ್ರಿ ಮೊದಲ ದಿನ ಮಾತ್ರವೇ ಕೇಜ್ರಿವಾಲ್‌ ಆಲೂ ಪೂರಿ ಸೇವಿಸಿದ್ದರು. ಆದರೂ ಅವರ ಬಗ್ಗೆ ಇ.ಡಿ. ನಾನಾ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಅತಿಷಿ ಕಿಡಿಕಾರಿದರು.ಜಾಮೀನಿಗಾಗಿ ಕೇಜ್ರಿ ಅತಿಯಾಗಿ ಮಾವು, ಸಿಹಿ ಸೇವನೆ: ಇ.ಡಿ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಕ್ಕರೆ ಕಾಯಿಲೆ ಇದ್ದರೂ ವೈದ್ಯಕೀಯ ಜಾಮೀನು ಪಡೆಯುವ ಸಲುವಾಗಿ ಮಾವಿನ ಹಣ್ಣು ಮತ್ತು ಸಿಹಿ ಪದಾರ್ಧಗಳನ್ನೆ ಹೆಚ್ಚಾಗಿ ತಿನ್ನುತ್ತಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ ಜಾಮೀನು ನೀಡಬಾರದೆಂದು ಜಾರಿ ನಿರ್ದೇಶನಾಲಯ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದೆ.