ಸಾರಾಂಶ
ಗುವಾಹಟಿ: ಭಾನುವಾರದಿಂದ ಪ್ರಾರಂಭಕ್ಕೆ ಉದ್ದೇಶಿಸಲಾಗಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ವೇಣುಗೋಪಾಲ್, ‘ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಮಣಿಪುರ ಜನರ ನೋವು ಆರಲಿ ಎಂದು ಅಲ್ಲಿಂದಲೇ ನಾವು ಯಾತ್ರೆಗೆ ಉದ್ದೇಶಿಸಿ ಕಳೆದ ವಾರವೇ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೆವು.
ಆದರೆ ಇದೀಗ, ನಾವು ಅನುಮತಿ ನೀಡಲು ಸಾಧ್ಯವಿಲ್ಲ. ಅರ್ಜಿಯನ್ನು ಕೇಂದ್ರ ಕಳುಹಿಸಲಾಗಿದೆ ಎಂದು ಮಣಿಪುರ ಸರ್ಕಾರ ಹೇಳುತ್ತಿದೆ. ಇದೇ ರೀತಿ ಅಸ್ಸಾಂನಲ್ಲೂ ಸಹ ಶಾಲೆಯ ಮೈದಾನವೊಂದರಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದಾರೆ. ಈ ರೀತಿ ರಾಜ್ಯವೊಂದರಲ್ಲಿ ರಾಜಕೀಯ ಪಕ್ಷವೊಂದರ ಸಮಾವೇಶಕ್ಕೆ ಅನುಮತಿ ನೀಡುವುದು ಕೇಂದ್ರ ಸರ್ಕಾರದ ಕೆಲಸವೇ’ ಎಂಬುದಾಗಿ ಪ್ರಶ್ನಿಸಿದ್ದಾರೆ.
ಈ ಹಿಂದೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಶ್ರೀನಗರಕ್ಕೆ ಸೆ.7, 2022ರಿಂದ 136 ದಿನಗಳ ಕಾಲ ಜ.30ರವರೆಗೆ 12 ರಾಜ್ಯಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಲಾಗಿತ್ತು.
ಇದರ ಮುಂದುವರಿದ ಭಾಗವಾಗಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಮಣಿಪುರದ ಇಂಫಾಲ್‌ನಿಂದ ಜ.14ರಂದು ಪ್ರಾರಂಭಿಸಿ ಮಾ.20ರಂದು ಮುಂಬೈನಲ್ಲಿ ಮುಕ್ತಾಯಗೊಳಿಸಲು ಕಾಂಗ್ರೆಸ್ ಉದ್ದೇಶಿಸಿದೆ.