ಸಾರಾಂಶ
ನವದೆಹಲಿ: ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಸೋಮವಾರವೂ ಮುಂಗಾರು ಮಳೆ ತನ್ನ ಅಬ್ಬರ ಮುಂದುವರೆಸಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಳಿಸಿದೆ. ಮಳೆಗೆ ಹಲವರು ಬಲಿಯಾಗಿದ್ದರೆ, ನೂರಾರು ಪ್ರಾಣಿಗಳು ಕೂಡಾ ಪ್ರಾಣ ಕಳೆದುಕೊಂಡಿವೆ.
ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸೋಮವಾರ ಪ್ರವಾಹ ಸ್ಥಿತಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಇದರಿಂದ 28 ಜಿಲ್ಲೆಯ 23 ಲಕ್ಷ ಮಂದಿ ಜನರು ಸಂತ್ರಸ್ತರಾಗಿದ್ದಾರೆ. 68,432.75 ಹೆಕ್ಟೇರ್ ಬೆಳೆ ಮುಳುಗಡೆಯಾಗಿದೆ. ಈ ವರ್ಷದಲ್ಲಿ ಪ್ರವಾಹಕ್ಕೆ 66 ಮಂದಿ ಬಲಿಯಾದರೆ, ಭೂಕುಸಿತ ಮತ್ತು ಚಂಡಮಾರುತಕ್ಕೆ ಸಿಲುಕಿ 78 ಮಂದಿ ಸಾವನ್ನಪ್ಪಿದ್ದಾರೆ. 269 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. 3,15,520 ನಿರಾಶ್ರಿತ ಶಿಬಿರಗಳಿಂದ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಹಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿನ 131 ವನ್ಯಜೀವಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡ: ರಾಜ್ಯದ ಚಂಪಾವತ್ ಹಾಗೂ ಉಧಂಸಿಂಗ್ ನಗರ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 200 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಭಾರಿ ಮಳೆ ಹಾಗೂ ಪ್ರತಿಕೂಲ ವಾತಾವರಣದಿಂದಾಗಿ ಸ್ಥಗಿತಗೊಂಡಿದ್ದ ಪವಿತ್ರ ಚಾರ್ ಧಾಮ್ ಯಾತ್ರೆಯು ಮರಳಿ ಆರಂಭವಾಗಿದೆ.
ಹಿಮಾಚಲ: ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಸೋಮವಾರ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 70 ಕ್ಕೂ ಹೆಚ್ಚು ರಸ್ತೆ ಮುಚ್ಚಲಾಗಿದೆ.
ಗೋವಾ: ರಾಜ್ಯದಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರೆದಿದೆ. ಉತ್ತರ ಗೋವಾದಲ್ಲಿ ಭಾರೀ ಮಳೆಗೆ ಕುಂಡೈಮ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಗೋಡೆ ಕುಸಿದ ಘಟನೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. 24 ಗಂಟೆಯಲ್ಲಿ ರಾಜಧಾನಿ ಪಣಜಿಯಲ್ಲಿ 360 ಮಿಮೀ ಮಳೆಯಾಗಿದೆ. ಶಾಲಾ- ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ.
ಅರುಣಾಚಲ: ರಾಜ್ಯದಲ್ಲೂ ಹಲವು ಕಡೆ ಭೂಕುಸಿತ ಉಂಟಾಗಿ ಹಲವು ಜಿಲ್ಲೆಗಳ ನಡುವೆ ಸಂಪರ್ಕ ಕಡಿತವಾಗಿದೆ. ರಾಜಧಾನಿ ಇಟಾನಗರಕ್ಕೆ ಸಂಪರ್ಕಿಸುವ ಕೆಲವು ರಸ್ತೆಗಳು ಕಡಿತಗೊಂಡಿವೆ. ಭೂಕುಸಿತದಿಂದ 160 ರಸ್ತೆಗಳು, 76 ವಿದ್ಯುತ್ ಮಾರ್ಗಗಳು, 30 ವಿದ್ಯುತ್ ಕಂಬಗಳು, 9 ಸೇತುವೆಗಳು, 147 ನೀರು ಸರಬರಾಜು ವ್ಯವಸ್ಥೆಗಳು ಹಾನಿಗೊಳಗಾಗಿವೆ. ಅಲ್ಲದೆ, 678 ಮನೆಗಳು ಮತ್ತು 155 ಗುಡಿಸಲುಗಳು ಹಾನಿಗೊಳಗಾಗಿವೆ.
ಮಹಾರಾಷ್ಟ್ರ: ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಥಾಣೆಯ ಗುಡ್ಡದ ಮೇಲೆ ಭೂಕುಸಿತ ಉಂಟಾಗಿದೆ. ಗುಡ್ಡದ ಮೇಲೆ ನಾಲ್ಕು ಮನೆಗಳಲ್ಲಿ ವಾಸವಿದ್ದ 25 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಆದರೆ ಆ ನಾಲ್ಕು ಮನೆಗಳು ಹಾಗೂ 2 ಮರಗಳು ಯಾವಾಗಲಾದರೂ ಕುಸಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.