ಸಾರಾಂಶ
ನವದೆಹಲಿ: ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವವನ್ನು ಹಿಂದಿ ಮಾಸದೊಂದಿಗೆ ಆಚರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
‘ಸಂವಿಧಾನದ ಪ್ರಕಾರ ದೇಶದ ಯಾವ ಭಾಷೆಗೂ ರಾಷ್ಟ್ರ ಭಾಷೆಯ ಸ್ಥಾನ ನೀಡಲಾಗಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದೆ. ಹೀಗಿರುವಾಗ, ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯ ಬಗ್ಗೆ ಕೇಂದ್ರದ ನಿರ್ಧಾರವನ್ನು ಮರುಪರಿಶೀಲಿಸಿ’ ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.
ಜೊತೆಗೆ, ‘ಇಂತಹ ಕಾರ್ಯಕ್ರಮಗಳು ಭಿನ್ನ ಭಾಷೆಗಳ ರಾಜ್ಯಗಳೊಂದಿಗಿನ ಸಂಬಂಧ ಹದಗೆಡಲು ಕಾರಣವಾಗಬಹುದು. ಕೇಂದ್ರ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಬಯಸಿದರೆ, ಪ್ರತಿ ರಾಜ್ಯಗಳ ಸ್ಥಳೀಯ ಹಾಗೂ ಶಾಸ್ತ್ರೀಯ ಭಾಷೆಗಳ ಕಾರ್ಯಕ್ರಮಗಳಿಗೂ ಸಮಾನ ಪ್ರಾಮುಖ್ಯತೆ ನೀಡಬೇಕು’ ಎಂದು ಸೂಚಿಸಿದ್ದಾರೆ.
ನಾಡಗೀತೆಯಿಂದ ‘ದ್ರಾವಿಡ’ ಪದ ಕಾಣೆ: ರಾಜ್ಯಪಾಲರ ವಿರುದ್ಧ ಸ್ಟಾಲಿನ್ ಗರಂ
ಚೆನ್ನೈ: ರಾಜ್ಯಪಾಲ ಆರ್.ಎನ್.ರವಿ ಉಪಸ್ಥಿತರಿದ್ದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡ ಗೀತೆಯಿಂದ ‘ದ್ರಾವಿಡ’ ಪದ ಕೈಬಿಟ್ಟ ಘಟನೆ ಗುರುವಾರ ನಡೆದಿದೆ. ಅದರ ಬೆನ್ನಲ್ಲೇ ಇದನ್ನು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಆಗ್ರಹ ಮಾಡಿದ್ದಾರೆ.
ಶುಕ್ರವಾರ ಇಲ್ಲಿ ಆಯೋಜನೆಗೊಂಡಿದ್ದ ಚೆನ್ನೈ ದೂರದರ್ಶನದ ಸುವರ್ಣಮಹೋತ್ಸವ ಮತ್ತು ಹಿಂದಿ ಮಾಸಾಚರಣೆ ಅಂತಿಮ ದಿನದ ಕಾರ್ಯಕ್ರಮದಲ್ಲಿ ಗಾಯಕರು ತಮಿಳುನಾಡ ಗೀತೆ ಹಾಡಿದ್ದರು. ಅದರೆ ಆ ಗೀತೆ ಹಾಡುವ ವೇಳೆ ದ್ರಾವಿಡ ಪದವನ್ನು ಬಿಡಲಾಗಿತ್ತು. ಇದರಿಂದ ಕುಪಿತರಾದ ಸಿಎಂ ಸ್ಟಾಲಿನ್, ‘ದ್ರಾವಿಡ ಅಲರ್ಜಿಯಿಂದ ಬಳಲುತ್ತಿರುವ ರಾಜ್ಯಪಾಲರು ರಾಷ್ಟ್ರಗೀತೆಯಲ್ಲಿರುವ ದ್ರಾವಿಡ ಪದವನ್ನೂ ಕೈಬಿಡುತ್ತಾರೆಯೇ? ತಮಿಳುನಾಡು ಹಾಗೂ ಇಲ್ಲಿನ ಜನರ ಭಾವನೆಗಳಿಗೆ ನಿರಂತರವಾಗಿ ಧಕ್ಕೆಯುಂಟುಮಾಡುತ್ತಿರುವ ಇವರನ್ನು ಕೇಂದ್ರ ಸರ್ಕಾರ ಈಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಅಚಾತುರ್ಯಕ್ಕೆ ಕ್ಷಮೆ ಯಾಚಿಸಿರುವ ದೂರದರ್ಶನ ತಮಿಳ್, ಗಾಯಕರ ನಿರ್ಲಕ್ಷದಿಂದ ಈ ತಪ್ಪಾಗಿದೆ ಎಂದಿದೆ.