ಸಾರಾಂಶ
ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್ ಬಣ) ಮುಖಂಡ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಚಿತ್ರನಟ ಸಲ್ಮಾನ್ ಖಾನ್ ವಿರುದ್ಧ ಕತ್ತಿ ಮಸೆಯುತ್ತಿರುವ ಪಂಜಾಬ್‌ನ ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದೆ.
ಮುಂಬೈ: ಪ್ರಸಿದ್ಧ ಬಾಲಿವುಡ್ ನಟರ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್ ಬಣ) ಮುಖಂಡ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಚಿತ್ರನಟ ಸಲ್ಮಾನ್ ಖಾನ್ ವಿರುದ್ಧ ಕತ್ತಿ ಮಸೆಯುತ್ತಿರುವ ಪಂಜಾಬ್‌ನ ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದೆ.
ಈ ಸಂಬಂಧ ಆ ಗ್ಯಾಂಗ್‌ನ ಸದಸ್ಯ ಎನ್ನಲಾದ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅನುಜ್ ಥಪನ್, ದಾವೂದ್ ಇಬ್ರಾಹಿಂನಂತಹ ಪಾತಕಿಗಳ ಜತೆ ನಂಟು ಹೊಂದಿದ ಕಾರಣಕ್ಕೆ ಗುಂಡಿಟ್ಟು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
1 ತಿಂಗಳಿಂದ ಪ್ಲಾನ್, ಸುಪಾರಿ:
ಈ ನಡುವೆ, ಸಿದ್ದಿಕಿ ಹತ್ಯೆ ಕೇಸಿನಲ್ಲಿ ಶನಿವಾರ ಇಬ್ಬರನ್ನು ಬಂಧಿಸಿ ಪರಾರಿ ಆದ ಒಬ್ಬನಿಗೆ ಬಲೆ ಬೀಸಲಾಗಿತ್ತು. ಇವರು ಬಾಡಿಗೆ ಹಂತಕರೆಂದು ವಿಚಾರಣೆ ವೇಳೆ ಗೊತ್ತಾಗಿದೆ.
ಇವರು ಹಿಂದೆ ಪಂಜಾಬ್‌ನಲ್ಲಿ ಬಂಧಿ ಆಗಿದ್ದಾಗ ಪರಸ್ಪರ ಪರಿಚಿತರಾಗಿದ್ದರು. ಒಂದು ತಿಂಗಳಿನಿಂದ ನಿಗಾ ಇಟ್ಟಿದ್ದರು. ಅವರ ಕಚೇರಿ ಹಾಗೂ ಮನೆಯ ಬಳಿ ಬೇಹುಗಾರಿಕೆ ಕೂಡ ನಡೆಸಿದ್ದರು. ಕುರ್ಲಾದಲ್ಲಿ ಮನೆಯೊಂದನ್ನು 14 ಸಾವಿರ ರು.ಗೆ ಬಾಡಿಗೆಗೆ ಪಡೆದು ನೆಲೆಸಿದ್ದರು. ಮೂವರೂ ಹಂತಕರಿಗೆ ಮುಂಗಡವಾಗಿ 50 ಸಾವಿರ ರು. ನೀಡಲಾಗಿತ್ತು ಹಾಗೂ ಕೊರಿಯರ್‌ನಲ್ಲಿ ಪಿಸ್ತೂಲು ಕಳಿಸಿಕೊಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಚಿತ್ರನಟರಾದ ಸಲ್ಮಾನ್ ಖಾನ್- ಶಾರುಖ್ ಖಾನ್ ಜಗಳ ಬಗೆಹರಿಸಿದ್ದ ಖ್ಯಾತಿಯ ಬಾಬಾ ಸಿದ್ದಿಕಿ (66) ಅವರನ್ನು ಅವರು ಮಹಾರಾಷ್ಟ್ರದ ಎನ್‌ಸಿಪಿ (ಅಜಿತ್ ಪವಾರ್ ಬಣ)ಯಲ್ಲಿ ಗುರುತಿಸಿಕೊಂಡಿದ್ದರು. ಅವರ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿ ಹೊರಗೆ ಶನಿವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಸಲ್ಲೂ ಮೇಲೇಕೆ ಬಿಷ್ಣೋಯಿ ಸಿಟ್ಟು?:
ರಾಜಸ್ಥಾನದ ಬಿಷ್ಣೋಯಿ ಸಮುದಾಯ ಕೃಷ್ಣಮೃಗವನ್ನು ಆರಾಧಿಸುತ್ತದೆ. ಅದನ್ನು ಬೇಟೆಯಾಡಿದ್ದ ಕಾರಣಕ್ಕೆ ಸಲ್ಮಾನ್ ಖಾನ್ ಅವರ ವಿರುದ್ಧ ಪಾತಕಿ ಬಿಷ್ಣೋಯಿ ಗ್ಯಾಂಗ್ ಕತ್ತಿ ಮಸೆಯುತ್ತಿದೆ.
==
ಸಿದ್ದಿಕಿ ಹತ್ಯೆ: ಬಂಧಿತರಲ್ಲಿ ಒಬ್ಬ ಬಾಲಾರೋಪಿ ಶಂಕೆ
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್ ಬಣ) ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಬಂಧಿತರಾಗಿರುವ 2 ಆರೋಪಿಗಳ ಪೈಕಿ ಒಬ್ಬನನ್ನು ಅ.21ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯ ಭಾನುವಾರ ಆದೇಶಿಸಿದೆ.
ಆದರೆ ಇನ್ನೊಬ್ಬ ಆರೋಪಿ ತನ್ನನ್ನು ತಾನು ಅಪ್ರಾಪ್ತ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಆರೋಪಿಯ ನಿಜವಾದ ವಯಸ್ಸಿನ ಪತ್ತೆಗೆ ಮೂಳೆ ಪರೀಕ್ಷೆ ನಡೆಸಿ, ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಪರೀಕ್ಷೆ ಆಧರಿಸಿ ಆತನ ವಿಚಾರಣೆಯನ್ನು ಬಾಲಾಪರಾಧಿ ನ್ಯಾಯಾಲಯ ನಡೆಸಬೇಕೋ ಅಥವಾ ಸಾಮಾನ್ಯ ನ್ಯಾಯಾಲಯ ನಡೆಸಬೇಕೋ ಎಂದು ನಿರ್ಧರಿಸಲಾಗುವುದು.ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಹರ್ಯಾಣ ನಿವಾಸಿ ಗುರ್ಮೈಲ್ ಬಲ್ಜೀತ್ ಸಿಂಗ್ ಹಾಗೂ ಇನ್ನೊರ್ವ ಯುವಕನನ್ನು ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
==
ರಾಜಕೀಯದಲ್ಲಿ ನಿಷ್ಣಾತ, ಬಾಲಿವುಡ್‌ನಲ್ಲೂ ಜನಪ್ರಿಯ
ಮುಂಬೈ: ಶನಿವಾರ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರದ್ದು ವರ್ಣರಂಜಿತ ರಾಜಕೀಯ. ಖ್ಯಾತ ನಟ ಹಾಗೂ ಕಾಂಗ್ರೆಸ್ ಮುಖಂಡ ರಾಜಕೀಯ ಕೃಪಾಕಟಾಕ್ಷದಿಂದ 1980ರಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಮುಂಬೈ ರಾಜಕಾರಣಿ ಬಾಲಿವುಡ್‌ನಲ್ಲಿ ಬಲು ಪ್ರಭಾವಿ.1980ರ ದಶಕದಲ್ಲಿ ಸುನೀಲ್ ದತ್ ಗರಡಿಯಲ್ಲಿ ಪಳಗಿದ ಬಾಬಾ, ಕಾಂಗ್ರೆಸ್ ಸೇರಿ ವಿವಿಧ ಹುದ್ದೆ ಅನುಭವಿಸಿದರು. 1999, 2004 ಹಾಗೂ 2009ರಲ್ಲಿ ಸತತವಾಗಿ 3 ಸಲ ಶಾಸಕರಾದರು. 2004ರಿಂದ 2008ರವರೆಗೆ ಮಹಾರಾಷ್ಟ್ರ ಪಡಿತರ ಸಚಿವರಾಗಿದ್ದರು. ಮುಸ್ಲಿಂ ಮುಖಂಡನಾದರೂ ಜಾತ್ಯತೀತ ಮನೋಭಾವದೊಂದಿಗೆ ಎಲ್ಲ ಧರ್ಮದವರಿಗೆ ಅನುರಾಗಿ ಆಗಿದ್ದರು. ಈ ನಡುವೆ 48 ವರ್ಷ ಕಾಂಗ್ರೆಸ್‌ನಲ್ಲಿದ್ದ ಬಳಿಕ ಏಕಾಏಕಿ ಕಳೆದ ಫೆಬ್ರವರಿಯಲ್ಲಿ ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿದ್ದರು.
ಇನ್ನು ಸುನೀಲ್ ದತ್ ಶಿಷ್ಯನಾದ ಕಾರಣ ಸಹಜವಾಗೇ ಅವರಿಗೆ ಬಾಲಿವುಡ್ ನಂಟು ಬೆಳೆಯಿತು. ಬಾಬಾ ಬಾಲಿವುಡ್‌ನಲ್ಲಿ ಎಷ್ಟು ಪ್ರಭಾವಿ ಆದರೆಂದರೆ, ಮುನಿದಿದ್ದ ಸಲ್ಮಾನ್ ಖಾನ್-ಶಾರುಖ್ ಖಾನ್ ನಡುವೆ ಸಂಧಾನ ಏರ್ಪಡಿಸಿದ್ದರು. ಇನ್ನು ಇವರು ಪ್ರತಿವರ್ಷ ನಡೆಸುತ್ತಿದ್ದ ಇಫ್ತಾರ್ ಪಾರ್ಟಿಗಳಿಗೆ ಬಾಲಿವುಡ್ ನಟ-ನಟಿಯರ ದಂಡೇ ಹರಿದುಬರುತ್ತಿತ್ತು.
==
ಬಿಷ್ಣೋಯಿ ದಾಳಿ ಭೀತಿ: ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ
ಮುಂಬೈ: ಎನ್‌ಸಿಪಿ ಮುಖಂಡ ಸಿದ್ದಿಕಿ ಹತ್ಯೆ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಹಾಗೂ ಅವರ ಮನೆಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ‘ಸಲ್ಮಾನ್ ಅವರ ಆಪ್ತರಾಗಿದ್ದರಿಂದ ಸಿದ್ದಿಕಿಯನ್ನು ಹತ್ಯೆ ಮಾಡಲಾಗಿದೆ’ ಎಂದು ಪಾತಕಿ ಬಿಷ್ಣೋಯಿ ಗ್ಯಾಂಗ್ ಹೇಳಿರುವ ಕಾರಣ ಸಲ್ಮಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ.