ಸಾರಾಂಶ
ಢಾಕಾ: ಇಲ್ಲಿಯ ಶಾಲಾ ಕಟ್ಟಡವೊಂದರ ಮೇಲೆ ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನವೊಂದು ಸೋಮವಾರ ಪತನವಾಗಿದೆ. ಘಟನೆಯಲ್ಲಿ 19 ಜನರು ಮೃತಪಟ್ಟಿದ್ದು, 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯವೊಂಡವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಏರುವ ಭೀತಿ ಎದುರಾಗಿದೆ.
ಮೃತರಲ್ಲಿ ಬಹುತೇಕರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎನ್ನಲಾಗಿದೆ. ಇತ್ತೀಚೆಗೆ ಭಾರತದ ಅಹಮದಾಬಾದ್‌ನಲ್ಲೂ ಏರಿಂಡಿಯಾ ವಿಮಾನ ಕಾಲೇಜೊಂದರ ಹಾಸ್ಟೆಲ್ ಮೇಲೆ ಪತನಗೊಂಡಿತ್ತು.ಚೀನಾ ನಿರ್ಮಿತ ‘ಎಫ್-7 ಬಿಜಿಐ ತರಬೇತಿ ಯುದ್ಧ ವಿಮಾನ ಮಧ್ಯಾಹ್ನ 1.06ಕ್ಕೆ ಹಾರಾಟ ಆರಂಭಿಸಿದ್ದು, ಕೆಲ ಹೊತ್ತಿನಲ್ಲೇ ದಿಯಾಬರಿಯಲ್ಲಿರುವ ಎರಡು ಮಹಡಿಯ ಮೈಲ್‌ಸ್ಟೋನ್ ಶಾಲೆ ಹಾಗೂ ಕಾಲೇಜು ಕಟ್ಟಡದ ಮೇಲೆ ಪತನಗೊಂಡಿದೆ.
ಈ ವೇಳೆ ಒಬ್ಬ ಪೈಲಟ್ ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಪೈಲಟ್ ತೀವ್ರ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದಂತೆ ವಿಮಾನ ಅಪ್ಪಳಿಸಿದ ರಭಸಕ್ಕೆ 18 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ.
ತಾಂತ್ರಿಕ ದೋಷವೇ ಘಟನೆಗೆ ಕಾರಣವೆಂದು ಪ್ರಾಥಮಿಕ ತನಿಖಾ ವರದಿಗಳು ಹೇಳಿವೆ. ಘಟನೆ ಕುರಿತು ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಜೊತೆಗೆ ಸರ್ಕಾರ, ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.ನೆರವು: ಈ ನಡುವೆ ಘಟನೆ ಸಂಬಂಧ ಎಲ್ಲಾ ರೀತಿಯ ನೆರವಿಗೆ ಸಿದ್ಧ ಎಂದು ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಮುಂಬೈ ರನ್‌ವೇನಲ್ಲಿ ಜಾರಿದ ಏರಿಂಡಿಯಾ: ಎಂಜಿನ್‌ಗೆ ಹಾನಿ
ಮುಂಬೈ: ಜೂ.12ರಂದು ಅಹಮದಾಬಾದ್‌ನಲ್ಲಿ 260 ಜನರ ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಮುಂಬೈನಲ್ಲಿ ಮತ್ತೊಂದು ಏರ್ ಇಂಡಿಯಾ ದುರಂತ ಕೂದಲೆಳೆಯಲ್ಲಿ ತಪ್ಪಿದೆ. ಸೋಮವಾರ ಬೆಳಗ್ಗೆ 9:27ರ ಹೊತ್ತಿಗೆ ಕೊಚ್ಚಿಯಿಂದ ಆಗಮಿಸಿದ್ದ ಏರ್ ಇಂಡಿಯಾ ಎ320 ವಿಮಾನವು ಭಾರಿ ಮಳೆಯಿದ್ದ ಕಾರಣ ರನ್‌ವೇ ಮೇಲೆ ಇಳಿಯುವಾಗ ಜಾರಿದೆ.
ಬಳಿಕ ಪಕ್ಕದ ಮಣ್ಣಿನ ಹಾಸಿನ ಮೇಲೆ 15-20 ಮೀಟರ್ ಹಾದು ಹೋಗಿ ಟ್ಯಾಕ್ಸಿ ವೇ ಮೇಲೆ ಬಂದು ನಿಂತಿದೆ. ಇದರಿಂದಾಗಿ ವಿಮಾನದ ಎಂಜಿನ್ ಬಣ್ಣಿಗೆ ಅಪ್ಪಳಿಸಿದ್ದು, ತೀವ್ರವಾಗಿ ಜಖಂಗೊಂಡಿದೆ. ಜೊತೆಗೆ ರೆಕ್ಕೆಗೂ ಹಾನಿಯಾಗಿದೆ. ನೆಲಕ್ಕಪ್ಪಳಿಸಿದ ರಭಸಕ್ಕೆ ಹಿಂಬದಿಯ 3 ಟೈರ್‌ಗಳು ಸಿಡಿದಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವಿಲ್ಲ.
ಒಂದೇ ದಿನ 2 ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಸಾವು ನೋವಿಲ್ಲ
ನವದೆಹಲಿ: ತಿರುಪತಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಮತ್ತು ಗೋವಾದಿಂದ ಇಂದೋರ್‌ಗೆ ತೆರಳುತ್ತಿದ್ದ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಎರಡೂ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಸೋಮವಾರ ನಡೆದಿದೆ. ತಿರುಪತಿಯಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ಕೆಲ ಹೊತ್ತಿನಲ್ಲೇ ದೋಷ ಕಾಣಿಸಿಕೊಂಡಿದೆ. ಹೀಗಾಗಿ ತಿರುಪತಿ ಸಮೀಪ 40 ನಿಮಿಷ ಹಾರಾಟ ನಡೆಸಿ ತಿರುಪತಿಗೆ ಮರಳಿದೆ. ಮತ್ತೊಂದೆಡೆ ಗೋವಾದಿಂದ 140 ಜನರ ಹೊತ್ತು ಇಂದೋರ್‌ಗೆ ಹೊರಟಿದ್ದ ವಿಮಾನದಲ್ಲಿ ಲ್ಯಾಂಡಿಂಗ್ ಗೇರ್ ಸಮಸ್ಯೆಯಾಗಿ 25 ನಿಮಿಷ ಹೆಚ್ಚುವರಿ ಹಾರಾಟ ನಡೆಸಿ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ತಾಂತ್ರಿಕ ದೋಷದ ಹಿನ್ನೆಲೆ ಏರಿಂಡಿಯಾ ಟೇಕಾಫ್ ರದ್ದು
ಈನಡುವೆ, ದೆಹಲಿಯಿಂದ ಕೋಲ್ಕತಾಗೆ ಹೊರಟಿದ್ದ 160 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ ತಾಂತ್ರಿಕ ದೋಷ ಕಂಡುಬಂದ ಕಾರಣ ಸುರಕ್ಷತಾ ದೃಷ್ಟಿಯಿಂದ ಹಾರಾಟವನ್ನು ರದ್ದುಗೊಳಿಸಲಾಯಿತು.
)
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))