ಸಾರಾಂಶ
ಢಾಕಾ : ಬಾಂಗ್ಲಾದೇಶದಲ್ಲಿ ಇಸ್ಕಾನ್ (ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ) ಚಟುವಟಿಕೆಗಳ ಮೇಲೆ ನಿಷೇಧ ಕೋರಿದ್ದ ಅರ್ಜಿಯನ್ನು ಬಾಂಗ್ಲಾ ಹೈಕೋರ್ಟ್ ವಜಾ ಮಾಡಿದೆ.
ಇಸ್ಕಾನ್ ಇತ್ತೀಚಿನ ಬಾಂಗ್ಲಾ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅದನ್ನು ನಿಷೇಧಿಸಬೇಕು ಎಂದು ವಕೀಲರೊಬ್ಬರು ಇಸ್ಕಾನ್‌ನ ಸಂತ ಚಿನ್ಮಯ ಕೃಷ್ಣದಾಸ್ ಬಂಧನವನ್ನು ಉಲ್ಲೇಖಿಸಿ ಬುಧವಾರ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರಿ ವಕೀಲರು ಕೂಡ, ‘ಇಸ್ಕಾನ್ ಮೂಲಭೂತವಾದಿ ಸಂಘಟನೆ’ ಎಂದಿದ್ದರು. ಆಗ ಹೈಕೋರ್ಟು, ‘ಇಸ್ಕಾನ್ ಮೇಲೆ ಏನು ಕ್ರಮ ಜರುಗಿಸಿದ್ದೀರಿ?’ ಎಂದು ಪ್ರಶ್ನಿಸಿ ಗುರುವಾರಕ್ಕೆ ವಿಚಾರಣೆ ಮಂದೂಡಿದ್ದರು.
ಗುರುವಾರ ವಿಚಾರಣೆ ಪುನಾರಂಭ ಆದಾಗ ಸರ್ಕಾರಿ ವಕೀಲರು, ‘ಇಸ್ಕಾನ್ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳುತ್ತೇವೆ. ಇನ್ನು ಇಸ್ಕಾನ್ ಬೆಂಬಲಿಗರ ಕೈಯಲ್ಲಿ ಥಳಿಸಿಕೊಂಡು ಸಾವನ್ನಪ್ಪಿದರು ಎನ್ನಲಾದ ವಕೀಲ ಸೈಫುಲ್ ಇಸ್ಲಾಂ ಪ್ರಕರಣದ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ’ ಎಂದರು.
ಆಗ ಇದಕ್ಕೆ ಉತ್ತರಿಸಿದ ದ್ವಿಸದಸ್ಯ ಪೀಠ, ‘ಸರ್ಕಾರವು ಇಲ್ಲಿ ದೇಶದ್ರೋಹ ಕೇಸು ಹಾಕಿದೆ ಹಾಗೂ ತನಿಖೆ ನಡೆಸುತ್ತಿದೆ. ಇನ್ನೂ ತನಿಖೆ ನಡೆಯುತ್ತಿರುವಾಗ ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಲ್ಲ’ ಎಂದು ಹೇಳಿ ನಿಷೇಧ ಕೋರಿದ್ದ ಅರ್ಜಿ ತಿರಸ್ಕರಿತು ಎಂದು ಅಟಾರ್ನಿ ಜನರಲ್ ಕಚೇರಿಯ ವಕ್ತಾರ ಹೇಳಿದ್ದಾರೆ.
ವಕೀಲನ ಹತ್ಯೆ ಹಿಂದೆ ನಾವಿಲ್ಲ- ಇಸ್ಕಾನ್:
‘ಬಂಧಿತ ಸಂತ ಚಿನ್ಮಯ ಕೃಷ್ಣದಾಸ್ ಕೋರ್ಟ್ ವಿಚಾರಣೆ ವೇಳೆ ಕೋರ್ಟಿನ ಹೊರಗೆ ಇಸ್ಕಾನ್ ಅನುಯಾಯಿಗಳು ವಕೀಲ ಸೈಫ್ ಉಲ್ ಇಸ್ಲಾಂರನ್ನು ಕೊಂದರು ಎಂಬ ಆರೋಪವನ್ನು ಇಸ್ಕಾನ್ ನಿರಾಕರಿಸಿದೆ. ಇದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದೆ.
ಇಸ್ಕಾನ್ ಸನ್ಯಾಸಿ ಚಿನ್ಮಯ್ ಬಿಡುಗಡೆಗೆ ಶೇಖ್ ಹಸೀನಾ ಆಗ್ರಹ
ನವದೆಹಲಿ: ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರನ್ನು ಬಿಡುಗಡೆ ಮಾಡುವಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆಗ್ರಹಿಸಿದ್ದಾರೆ.ದೇಶ ತೊರೆದು ದಿಲ್ಲಿಯಲ್ಲಿ ವಾಸವಾಗಿರುವ ಹಸೀನಾ ಗುರುವಾರ ಹೇಳಿಕೆ ಬಿಡುಗಡೆ ಮಾಡಿ, ಯೂನಸ್ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಸಾಮಾನ್ಯ ಜನರಿಗೆ ಭದ್ರತೆ ಒದಗಿಸುವಲ್ಲೂ ಸೋತಿದೆ. ಸಾಮಾನ್ಯ ಜನರ ಮೇಲಿನ ಈ ನೇರ ಮತ್ತು ಪರೋಕ್ಷ ಚಿತ್ರಹಿಂಸೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸನಾತನ ಧರ್ಮದ ಉನ್ನತ ನಾಯಕನನ್ನು ಅಕ್ರಮವಾಗಿ ಬಂಧಿಸಲಾಗಿದೆ. ಅವರ ಶೀಘ್ರ ಬಿಡುಗಡೆಗೆ ನಾನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.
‘ಚಿತ್ತಗಾಂಗ್‌ನಲ್ಲಿ ದೇವಸ್ಥಾನವೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ಮಂದಿರಗಳು, ಚರ್ಚ್‌ಗಳು, ಮಠಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಎಲ್ಲ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಗೆ ನಾನು ಒತ್ತಾಯಿಸುತ್ತೇನೆ’ ಎಂದು ಆಗ್ರಹಿಸಿದ್ದಾರೆ.