2 ವರ್ಷದಲ್ಲಿ ಬೆಂಗಳೂರಿಗೆ ಬರಲಿದೆ ಏರ್‌ಟ್ಯಾಕ್ಸಿ ಸೇವೆ

| Published : Apr 21 2024, 02:15 AM IST / Updated: Apr 21 2024, 09:24 AM IST

ಸಾರಾಂಶ

ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಆರಂಭವಾಗಲಿದ್ದು, 2-3 ಸಾವಿರ ರು. ದರದಲ್ಲಿ ನಗರದ ಒಂದು ಬದಿಯಿಂದ ಮತ್ತೊಂದು ಬದಿಗೆ ಸೇವೆ ನೀಡಲು ಸಿದ್ಧತೆ ನಡೆಸುತ್ತಿದೆ.

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೂರು ಮಹಾನಗರಗಳಲ್ಲಿ ಇಂಡಿಗೋ ವಿಮಾನಯಾನದ ಅಂಗಸಂಸ್ಥೆ ಇಂಟರ್‌ಗ್ಲೋಬ್‌ ಎಂಟರ್‌ಪ್ರೈಸಸ್‌ ಮತ್ತು ಅಮೆರಿಕ ಮೂಲದ ಆರ್ಚರ್‌ ಏವಿಯೇಷನ್‌ ಜಂಟಿ ಸಹಭಾಗಿತ್ವದಲ್ಲಿ 2026ರ ವೇಳೆಗೆ ಏರ್‌ಟ್ಯಾಕ್ಸಿ ಸೇವೆ ಆರಂಭಿಸುವುದು ಖಚಿತವಾಗಿದೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆರ್ಚರ್‌ ಏವಿಯೇಷನ್‌ ಸಂಸ್ಥಾಪಕ ಆ್ಯಡಮ್‌ ಗೋಲ್ಡ್‌ಸ್ಟೀನ್‌, ‘ಮೊದಲಿಗೆ ದೆಹಲಿಯಲ್ಲಿ ಕನಾಟ್‌ ಪ್ಲೇಸ್‌ನಿಂದ ಗುರುಗ್ರಾಮಕ್ಕೆ 4 ಸೀಟಿನ ಏರ್‌ಟ್ಯಾಕ್ಸಿ ಸಂಚಾರ ಆರಂಭಿಸಲಾಗುವುದು. ರಸ್ತೆ ಮಾರ್ಗದಲ್ಲಿ 90 ನಿಮಿಷ ತಗುಲುವ ಸಂಚಾರವನ್ನು ವಾಯುಮಾರ್ಗದಲ್ಲಿ ಕೇವಲ 7 ನಿಮಿಷಗಳಲ್ಲಿ ತಲುಪಬಹುದು. ಇದಕ್ಕಾಗಿ 2-3 ಸಾವಿರ ರು. ದರ ನಿಗದಿಪಡಿಸಲು ಚಿಂತಿಸಲಾಗುತ್ತಿದೆ’ ಎಂದು ತಿಳಿಸಿದರು.

ಮೊದಲಿಗೆ 200 ವಿಮಾನಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಬಳಿಕ ವರ್ಷಕ್ಕೆ 650 ವಿಮಾನವನ್ನು ತಯಾರಿಸಲಾಗುವುದು. ಮುಂದಿನ ದಿನಗಳಲ್ಲಿ ಇವುಗಳನ್ನು ಭಾರತದಲ್ಲೇ ತಯಾರಿಸಲು ಯೋಜನೆ ರೂಪಿಸಲಾಗುವುದು ಎಂದೂ ತಿಳಿಸಿದರು.