ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಭರವಸೆ ಘೋಷಣೆ

| N/A | Published : Nov 01 2025, 02:00 AM IST / Updated: Nov 01 2025, 04:46 AM IST

NDA manifesto
ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಭರವಸೆ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

  ಬಿಹಾರದಲ್ಲಿ ವಿಪಕ್ಷ ಇಂಡಿಯಾ ಕೂಟದ ಬೆನ್ನಲ್ಲೇ ಎನ್‌ಡಿಎ ಮೈತ್ರಿಕೂಟವೂ ಭರ್ಜರಿ ಘೋಷಣೆಗಳುಳ್ಳ 69 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ ಹಾಗೂ 1 ಕೋಟಿ ಲಖಪತಿ ದೀದಿಯರ ಸೃಷ್ಟಿ ಭರವಸೆಯಿಂದ ಹಿಡಿದು ಮೂಲಸೌಕರ್ಯ ನಿರ್ಮಾಣದ ವರೆಗೆ   ಭರವಸೆಗಳನ್ನು ನೀಡಲಾಗಿದೆ.

 ಪಟನಾ :  ಚುನಾವಣಾ ಕಣ ಬಿಹಾರದಲ್ಲಿ ವಿಪಕ್ಷ ಇಂಡಿಯಾ ಕೂಟದ ಬೆನ್ನಲ್ಲೇ ಎನ್‌ಡಿಎ ಮೈತ್ರಿಕೂಟವೂ ಭರ್ಜರಿ ಘೋಷಣೆಗಳುಳ್ಳ 69 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ ಹಾಗೂ 1 ಕೋಟಿ ಲಖಪತಿ ದೀದಿಯರ ಸೃಷ್ಟಿ ಭರವಸೆಯಿಂದ ಹಿಡಿದು ಮೂಲಸೌಕರ್ಯ ನಿರ್ಮಾಣದ ವರೆಗೆ ಸುಮಾರು 25 ಭರವಸೆಗಳನ್ನು ನೀಡಲಾಗಿದೆ.

ಹಾಗೆಯೇ ವಿಪಕ್ಷಗಳ ರೀತಿ ಕೆಲವು ಉಚಿತ ಆಶ್ವಾಸನೆಗಳನ್ನೂ ನೀಡಿದ್ದು, ಅದರಲ್ಲಿ ಬಡ ಕುಟುಂಬಗಳಿಗೆ 125 ಯೂನಿಟ್‌ ವರೆಗೆ ಉಚಿತ ವಿದ್ಯುತ್‌, ಬಡವರಿಗೆ ಉಚಿತ ಪಡಿತರ, 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ, ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಕೇಜಿಯಿಂದ ಪೀಜಿ ವರೆಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣ ಪಡೆವ ಎಸ್ಸಿ ವಿದ್ಯಾರ್ಥಿಗಳಿಗೆ ಮಾಸಿಕ 2000 ರು. ನೆರವು., - ಕಿಸಾನ್ ಸಮ್ಮಾನ್ ನಿಧಿ ಮೊತ್ತ ವಾರ್ಷಿಕ ₹6,000ನಿಂದ ₹9,000ಕ್ಕೆ, ಉದ್ಯಮ ನಡೆಸಲು ಬಯಸುವ ಮಹಿಳೆಯರಿಗೆ 2 ಲಕ್ಷ ರು. ವರೆಗೆ ಸಹಾಯಧನ- ಇವು ಪ್ರಮುಖವಾಗಿವೆ.

ಬಿಹಾರ ಸಿಎಂ ನಿತೀಶ್‌ ಕುಮಾರ್‌, ಡಿಸಿಎಂ ಸಾಮ್ರಾಟ್‌ ಚೌಧರಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಜಿತನ್‌ ರಾಂ ಮಾಂಝಿ, ಚಿರಾಗ್‌ ಪಾಸ್ವಾನ್‌ ಹಾಗೂ ಮೈತ್ರಿಕೂಟದ ಕೆಲ ನಾಯಕರ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಏನೇನು ಭರವಸೆಗಳು?: 

ಒಂದೊಮ್ಮೆ ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದರೆ, 1 ಕೋಟಿ ಯುವಕರಿಗೆ ಉದ್ಯೋಗ ಒದಗಿಸಲಾಗುವುದು ಹಾಗೂ ಅಷ್ಟೇ ಪ್ರಮಾಣದ ಮಹಿಳೆಯರನ್ನು ಸರ್ಕಾರದ ಧನಸಹಾಯ ಯೋಜನೆಗಳ ಮೂಲಕ ಲಕ್ಷಾಧಿಪತಿಗಳನ್ನಾಗಿ (ಲಖಪತಿ ದೀದಿ) ಮಾಡಲಾಗುವುದು.

ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಶುವಿಹಾರದಿಂದ ಹಿಡಿದು ಸ್ನಾತಕೋತ್ತರ ಪದವಿಯ ತನಕ ಉಚಿತ ಶಿಕ್ಷಣ ನೀಡಲಾಗುವುದು. ಉನ್ನತ ಶಿಕ್ಷಣ ಪಡೆಯುವ ಎಸ್‌ಸಿ ವಿದ್ಯಾರ್ಥಿಗಳಿಗೆ ಮಾಸಿಕ 2000 ರು. ಸಹಾಯಧನ ನೀಡಲಾಗುವುದು.

ಉಚಿತ ಪಡಿತರ ಹಂಚಿಕೆ, 5 ಲಕ್ಷ ರು. ವರೆಗೆ ಉಚಿತ ಚಿಕಿತ್ಸೆ, 50 ಲಕ್ಷ ಪಕ್ಕಾ ಮನೆಗಳ ನಿರ್ಮಾಣದ ಭರವಸೆ ನೀಡಲಾಗಿದೆ. ಜತೆಗೆ, ಸೀತಾಮಾತೆಯ ಜನ್ಮಸ್ಥಳವೆಂದು ನಂಬಲಾಗಿರುವ ಸೀತಾಮಢಿಯಲ್ಲಿ ಭವ್ಯ ಮಂದಿರ ನಿರ್ಮಿಸಿ, ಅದನ್ನು ಯಾತ್ರಾ ಸ್ಥಳವಾಗಿಸುವುದಾಗಿಯೂ ಹೇಳಲಾಗಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಸಾಮ್ರಾಟ್‌ ಚೌಧರಿ, ‘ಕೌಶಲ್ಯ ಆಧಾರಿತ ಉದ್ಯೋಗವನ್ನು ಉತ್ತೇಜಿಸಲು ಕೌಶಲ್ಯ ಜನಗಣತಿ ನಡೆಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಮೆಗಾ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಇದನ್ನು ಜಾಗತಿಕ ಕೌಶಲ್ಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವುದು’ ಎಂದು ಹೇಳಿದರು. 

ಪ್ರಮುಖ ಭರವಸೆಗಳು ಇಂತಿವೆ:

- ಬಡ ಕುಟುಂಬಗಳಿಗೆ 125 ಯೂನಿಟ್‌ ವರೆಗೆ ಉಚಿತ ವಿದ್ಯುತ್‌- ಪಂಚಾಮೃತ ಯೋಜನೆಯಡಿ ಬಡವರಿಗೆ ಉಚಿತ ಪಡಿತರ- ರಾಜ್ಯದ ಜನರಿಗೆ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ

- ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತ ವಾರ್ಷಿಕ 6,000 ರು.ನಿಂದ 9,000 ರು.ಗೆ ಹೆಚ್ಚಳ

- ಮೀನುಗಾರರ ಸಹಾಯಧನ ವಾರ್ಷಿಕ 4500 ರು.ನಿಂದ 9000 ರು.ಗೆ ಏರಿಕೆ- ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯ ಭರವಸೆ

- ಅಧಿಕಾರಕ್ಕೆ ಬಂದ 5 ವರ್ಷದಲ್ಲಿ 1 ಕೋಟಿಗೂ ಹೆಚ್ಚು ಯುವಕರಿಗೆ ಸರ್ಕಾರಿ ನೌಕರಿ

- ಉನ್ನತ ವ್ಯಾಸಂಗ ಮಾಡುತ್ತಿರುವ ಎಸ್ಸಿ ವಿದ್ಯಾರ್ಥಿಗಳಿಗೆ ಮಾಸಿಕ 2000 ರು. ನೆರವು

- -ಬಡ ಕುಟುಂಬದ ಮಕ್ಕಳಿಗೆ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿಯ ವರೆಗೆ ಉಚಿತ ಶಿಕ್ಷಣ

- ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗೆ ಧನಸಹಾಯ

- ಮಹಿಳೆಯರ ಉದ್ಯೋಗಾರಂಭಕ್ಕೆ ನೆರವಾಗಲು ಮುಖ್ಯಮಂತ್ರಿ ಮಹಿಳಾ ರೋಜಗಾರ್‌ ಯೋಜನೆ

- ಇದರಡಿ ಮೊದಲು 10,000 ರು. ನೆರವು. ಉದ್ಯಮ ಯಶಸ್ವಿ ಆದರೆ ₹2 ಲಕ್ಷ ವರೆಗೆ ಧನಸಹಾಯ

- 1 ಕೋಟಿ ಮಹಿಳೆಯರನ್ನು ಲಖ್‌ಪತಿ ದೀದಿಯರನ್ನಾಗಿ ಮಾಡುವ ಭರವಸೆ

- ಜಿಲ್ಲೆಗಳ ಪ್ರಮುಖ ಶಾಲೆಗಳ ಉನ್ನತೀಕರಣಕ್ಕೆ ಒಟ್ಟು 5,000 ಕೋಟಿ ರು. ಹಂಚಿಕೆ

- ಪ್ರತಿ ವಿಭಾಗದಲ್ಲಿ ಎಸ್ಸಿ ವಿದ್ಯಾರ್ಥಿಗಳಿಗೆ ವಸತಿ ಶಾಲೆ

- 50 ಲಕ್ಷ ಪಕ್ಕಾ ಮನೆಗಳ ನಿರ್ಮಾಣ । ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ವಿಸ್ತರಣೆ

- ಸೀತಾಮಾತೆ ಜನ್ಮಸ್ಥಳ ಸೀತಾಮಢಿಗೆ ‘ಸೀತಾಪುರಂ’ ಎಂದು ಮರುನಾಮಕರಣ, ವಿಶ್ವ ದರ್ಜೆಯ ಆಧ್ಯಾತ್ಮಿಕ ನಗರ ನಿರ್ಮಾಣ

- ರಾಜ್ಯದಲ್ಲಿ 7 ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ

- 4 ನಗರಗಳಿಗೆ ಹೊಸ ಮೆಟ್ರೋ ರೈಲು ಸೇವೆ ವಿಸ್ತರಣೆ 

- ಪ್ರತಿ ವಿಭಾಗದಲ್ಲಿ ಕ್ರೀಡಾ ನಗರ ಮತ್ತು ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

- ಪ್ರತಿ ಜಿಲ್ಲೆಯಲ್ಲಿ 1 ಕಾರ್ಖಾನೆ ಮತ್ತು 10 ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ

- ರಕ್ಷಣಾ ಕಾರಿಡಾರ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಪಾರ್ಕ್‌ಗಳ ಸ್ಥಾಪನೆ

- 100 ಎಂಎಸ್‌ಎಂಇ ಪಾರ್ಕ್‌ ಮತ್ತು 50,000ಕ್ಕೂ ಹೆಚ್ಚು ಗುಡಿ ಕೈಗಾರಿಕೆ ಸ್ಥಾಪನೆ

-7 ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣ. 3,600 ಕಿ.ಮೀ. ರೈಲ್ವೆ ಹಳಿಗಳ ಆಧುನೀಕರಣ

-ಪ್ರತಿ ಜಿಲ್ಲೆಯಲ್ಲೂ ವಿಶ್ವ ದರ್ಜೆಯ ವೈದ್ಯಕೀಯ ನಗರ ಮತ್ತು ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿ

Read more Articles on