ಸಾರಾಂಶ
ದಾಹೋದ್ (ಗುಜರಾತ್): ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವಾಗತಿಸಿ ಆಕೆಯ ಸಂಬಂಧಿಕರು ಮತ್ತು ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದವರು ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಕರಣದ ಸಾಕ್ಷಿ ಅಬ್ದುಲ್ ರಜಾಕ್ ಮನ್ಸೂರಿ, ‘ಬಿಲ್ಕಿಸ್ ಬಾನೋಗೆ ಇಂದು ನಿಜವಾದ ನ್ಯಾಯ ದೊರಕಿದೆ. ನಾನು ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಪ್ರಕರಣ ನಡೆದಾಗ ಸಾಕ್ಷ್ಯ ನುಡಿದಿದ್ದು ಅದರಂತೆ ಅವರನ್ನು ಜೈಲುಶಿಕ್ಷೆಗೆ ಗುರಿ ಮಾಡಬೇಕೆಂದು ತೀರ್ಪು ನೀಡಿತ್ತು. ಆದರೆ ಅವರನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ್ದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದೆವು.
ಈಗ ನ್ಯಾಯಾಲಯವು ಎಲ್ಲ 11 ಅಪರಾಧಿಗಳನ್ನು ಮತ್ತೆ ಸೆರೆವಾಸಕ್ಕೆ ಮುಂದುವರೆಸಲು ಆದೇಶ ನೀಡಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು. ಇದೇ ವೇಳೆ ದೇವಗಢ್ ಬರಿಯಾದಲ್ಲಿ ವಾಸವಿರುವ ಬಿಲ್ಕಿಸ್ ಬಾನೊ ಅವರ ಸಂಬಂಧಿಕರು ತೀರ್ಪು ಪ್ರಕಟವಾಗಿರುವ ಕುರಿತು ಟೀವಿಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಪಟಾಕಿ ಹಚ್ಚಿ ಸಂಭ್ರಮಿಸಿದರು.
ಸುಪ್ರೀಂ ಕೋರ್ಟ್ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ವಜಾ ಮಾಡಿ ಎಲ್ಲ ಅಪರಾಧಿಗಳೂ ಇನ್ನು ಎರಡು ವಾರಗಳೊಳಗೆ ಶರಣಾಗುವಂತೆ ತೀರ್ಪು ನೀಡಿದೆ.