ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಅವಕಾಶ : ಹೊಸ ಮಸೂದೆಗೆ ವಿಪಕ್ಷಗಳಿಂದ ವಿರೋಧ

| Published : Aug 09 2024, 02:04 AM IST / Updated: Aug 09 2024, 04:50 AM IST

ಸಾರಾಂಶ

ಮೋದಿ 3.0 ಸರ್ಕಾರ ತರುತ್ತಿರುವ ಮೊದಲ ಮಹತ್ವದ ಮಸೂದೆ ಎಂದು ವಿಶ್ಲೇಷಿಸಲಾಗಿರುವ ಮುಸ್ಲಿಮರಿಗೆ ಸಂಬಂಧಿಸಿದ ‘ವಕ್ಫ್ (ತಿದ್ದುಪಡಿ) ಮಸೂದೆ’ಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

 ನವದೆಹಲಿ :  ಮೋದಿ 3.0 ಸರ್ಕಾರ ತರುತ್ತಿರುವ ಮೊದಲ ಮಹತ್ವದ ಮಸೂದೆ ಎಂದು ವಿಶ್ಲೇಷಿಸಲಾಗಿರುವ ಮುಸ್ಲಿಮರಿಗೆ ಸಂಬಂಧಿಸಿದ ‘ವಕ್ಫ್ (ತಿದ್ದುಪಡಿ) ಮಸೂದೆ’ಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಆದರೆ ವಿರೋಧ ಪಕ್ಷಗಳು, ‘ಮಸೂದೆಯಲ್ಲಿನ ಅಂಶಗಳು ಮುಸ್ಲಿಂ ವಿರೋಧಿ’ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ ಕಾರಣ, ಸದ್ಯಕ್ಕೆ ಅದನ್ನು ಅಂಗೀಕರಿಸದೇ ಜಂಟಿ ಸಂಸದೀಯ ಸಮಿತಿಗೆ ಕಳಿಸಲು ಸರ್ಕಾರ ತೀರ್ಮಾನಿಸಿದೆ.

ಮಸೂದೆಯಲ್ಲಿ, ಏಕಪಕ್ಷೀಯವಾಗಿ ವಕ್ಫ್‌ ಮಂಡಳಿಗಳು ಯಾವುದೇ ಭೂಮಿಯನ್ನು ವಶಪಡಿಸಿಕೊಳ್ಳುವ ಅಧಿಕಾರ ಕಿತ್ತುಕೊಳ್ಳುವ ಅಂಶವಿದೆ. ಅಲ್ಲದೆ, ವಕ್ಫ್‌ ಮಂಡಳಿಯಲ್ಲಿ ಮೊದಲ ಬಾರಿ ಮಹಿಳೆಯರಿಗೆ ಹಾಗೂ ಮುಸ್ಲಿಮೇತರರಿಗೆ ಪ್ರಾತಿನಿಧ್ಯ ಕಲ್ಪಿಸುವ ಪ್ರಸ್ತಾವ ಇರಿಸಲಾಗಿದೆ.

ಮಸೂದೆಗೆ ವಿರೋಧ, ಸರ್ಕಾರ ಸ್ಪಷ್ಟನೆ:

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. ಇದೇ ವೇಳೆ, ವಕ್ಫ್‌ ಕಾಯ್ದೆ ಬಂದ ನಂತರ ತನ್ನ ಅಸ್ತಿತ್ವ ಕಳೆದುಕೊಂಡಿದ್ದ ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ-2024 ಅನ್ನು ಸಹ ಮಂಡಿಸಿದರು.ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿ, ‘ಇದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಂಗ ಮಾಡುವ ಯತ್ನವಾಗಿದೆ. ಅಲ್ಲದೆ, ಮುಸ್ಲಿಮೇತರರಿಗೆ ವಕ್ಫ್‌ ಮಂಡಳಿಯಲ್ಲಿ ಅವಕಾಶ ನೀಡಿದ್ದೇಕೆ? ಎಂದು ಕಿಡಿಕಾರಿದವು.

ಆದರೆ ಇದನ್ನು ನಿರಾಕರಿಸಿದ ರಿಜಿಜು, ‘ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವಿಲ್ಲ. ಯಾವುದೇ ನಿಬಂಧನೆಯನ್ನು ಮಸೂದೆ ಉಲ್ಲಂಘಿಸಿಲ್ಲ. 1995ರಲ್ಲಿ ವಕ್ಫ್‌ ಮಂಡಳಿಗೆ ಪರಮಾಧಿಕಾರ ನೀಡುವಂಥ ತಿದ್ದುಪಡಿ ಕಾಯ್ದೆ ಅಂಗೀಕರಿಸಲಾಗಿತ್ತು.

 ಅದು ಸಂವಿಧಾನಕ್ಕಿಂತ ಮಿಗಿಲಾದ ಕಾನೂನಾಗಿತ್ತು. ಯಾವುದೇ ಕಾನೂನು ಸಂವಿಧಾನಕ್ಕಿಂತ ಮಿಗಿಲಾಗಲು ಸಾಧ್ಯವಿಲ್ಲ. ಹೀಗಾಗಿ 1995ರಲ್ಲೇ ಸಂಸದೀಯ ಸ್ಥಾಯಿ ಸಮಿತಿ ಈ ಕಾಯ್ದೆಯ ಮರುಪರಿಶೀಲನೆಗೆ ಶಿಫಾರಸು ಮಾಡಿತ್ತು. ಅದರಂತೆ, ಇದನ್ನು ಸರಿಪಡಿಸಲು ಈಗ ಪುನಃ ತಿದ್ದುಪಡಿ ಮಾಡಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು.ಆದರೆ, ಮಸೂದೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ಜಂಟಿ ಸದನ ಸಮಿತಿ ಪರಿಶೀಲನೆಗೆ ಒಪ್ಪಿಸುವುದಾಗಿಯೂ ರಿಜಿಜು ಪ್ರಕಟಿಸಿದರು ಮತ್ತು ‘ವಿಪಕ್ಷಗಳು ವಿನಾಕಾರಣ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ’ ಎಂದು ಕಿಡಿಕಾರದರು.

ಹೀಗಾಗಿ ಸದ್ಯಕ್ಕೆ ಈ ಮಸೂದೆ ಅಂಗೀಕಾರ ಆಗುವುದಿಲ್ಲ. ಇನ್ನೂ ಹಲವು ತಿಂಗಳು ಹಿಡಿಯುವ ಸಾಧ್ಯತೆ ಇದೆ.

ಮಸೂದೆಯಲ್ಲೇನಿದೆ?

- ಈಗಿನ ವಕ್ಫ್‌ ಕಾಯ್ದೆಯ ‘ಸೆಕ್ಷನ್‌-40’, ವಕ್ಫ್ ಮಂಡಳಿಗೆ ಯಾವುದೇ ಜಮೀನನ್ನು ವಶಪಡಿಸಿಕೊಂಡು ಅದನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಅಧಿಕಾರ ನೀಡುತ್ತದೆ. ಆದರೆ ಈ ಸೆಕ್ಷನ್‌-40 ಅನ್ನು ಹೊಸ ಮಸೂದೆಯಲ್ಲಿ ಕೈಬಿಡಲಾಗಿದೆ. ವಕ್ಫ್‌ ಮಂಡಳಿಯು ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಜಿಲ್ಲಾಧಿಕಾರಿಗಳ ಪರಿಶೀಲನೆ ಹಾಗೂ ಅವರ ಒಪ್ಪಿಗೆ ಕಡ್ಡಾಯವಾಗಲಿದೆ. ಬಳಿಕ ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಲಿದ್ದಾರೆ. ಈ ಮೂಲಕ ವಕ್ಫ್‌ ಮಂಡಳಿಯನ್ನು ದುರ್ಬಳಕೆ ಮಾಡಿಕೊಂಡು ಪರೋಕ್ಷವಾಗಿ ಜಮೀನು ಕಬ್ಜಾ ಮಾಡಿಕೊಳ್ಳುವ ಪರಿಪಾಠ ಅಂತ್ಯವಾಗಲಿದೆ.

- ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರಿಗೆ ಮೊದಲ ಬಾರಿ ಪ್ರಾತಿನಿಧ್ಯ ನೀಡಲಾಗುತ್ತದೆ. ಕೇಂದ್ರೀಯ ಮಂಡಳಿ ಹಾಗೂ ರಾಜ್ಯ ವಕ್ಫ್‌ ಮಂಡಳಿಗಳಲ್ಲಿ ತಲಾ ಇಬ್ಬರು ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಲಿದೆ.

- ಬೋಹರಾ ಮತ್ತು ಅಘಖಾನಿಗಳಿಗೆ ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸಲು ಮಸೂದೆಯು ಪ್ರಸ್ತಾಪಿಸುತ್ತದೆ. ಮುಸ್ಲಿಂ ಸಮುದಾಯಗಳಲ್ಲಿನ ಪ್ರತ್ಯೇಕ ಪಂಥಗಳಾದ ಶಿಯಾಗಳು, ಸುನ್ನಿಗಳು, ಬೋಹ್ರಾಗಳು, ಅಗಾಖಾನಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ವಕ್ಫ್‌ ಮಂಡಳಿಯಲ್ಲಿ ಪ್ರಾತಿನಿಧ್ಯ ಲಭಿಸಲಿದೆ.

- ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಆಚರಿಸುವ ಮತ್ತು ಅಂತಹ ಆಸ್ತಿಯ ಮಾಲೀಕತ್ವವನ್ನು ಹೊಂದಿರುವ ವ್ಯಕ್ತಿಯನ್ನು ‘ವಕ್ಫ್‌’ (ವಾಕಿಫ್‌ - ದಾನಿ) ಎಂದು ಘೋಷಿಸಲಾಗುತ್ತದೆ.

- ಹಾಲಿ ವಕ್ಫ್‌ ಕಾಯ್ದೆಯು ಮೌಖಿಕ ಒಪ್ಪಂದದ ಮೂಲಕ ವ್ಯಕ್ತಿಗೆ ಆಸ್ತಿಯನ್ನು ವಕ್ಫ್ (ದಾನ) ಆಗಿ ನೀಡಲು ಅನುಮತಿಸುತ್ತದೆ. ಆದರೆ ತಿದ್ದುಪಡಿ ಮಸೂದೆಯು ದಾನವನ್ನು ಲಿಖಿತ ರೂಪದಲ್ಲಿ (‘ವಕ್ಫಾನಾಮಾ’ ದಾಖಲೆ ಪತ್ರದಲ್ಲಿ ನಮೂದಿಸಿ) ಮಾಡಬೇಕು ಎಂಬುದನ್ನು ಕಡ್ಡಾಯಗೊಳಿಸುತ್ತದೆ.

- ಕೇಂದ್ರ ಸರ್ಕಾರವು ವಕ್ಫ್ ಆಸ್ತಿಗಳ ಲೆಕ್ಕಪರಿಶೋಧನೆಯನ್ನು ಆದೇಶಿಸುವ ಅಧಿಕಾರ ಹೊಂದಿರುತ್ತದೆ. ಈ ಲೆಕ್ಕಪರಿಶೋಧನೆಗಳನ್ನು ಭಾರತದ ಮಹಾಲೆಕ್ಕಪರಿಶೋಧಕರು (ಸಿಎಜಿ) ಅಥವಾ ಗೊತ್ತುಪಡಿಸಿದ ಅಧಿಕಾರಿಗಳು ನೇಮಿಸಿದ ಲೆಕ್ಕಪರಿಶೋಧಕರು ನಡೆಸುತ್ತಾರೆ.

ತಿದ್ದುಪಡಿ ಏಕೆ?

ವಕ್ಫ್‌ ಮಂಡಳಿಯ ಅನಿಯಂತ್ರಿತ ಅಧಿಕಾರಗಳು ಮತ್ತು ದುರುಪಯೋಗಗಳು ಜನರ ಆತಂಕಕ್ಕೆ ಕಾರಣವಾಗಿದ್ದವು. ಉದಾಹರಣೆಗೆ: 2022ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ವಕ್ಫ್ ಬೋರ್ಡ್‌, ತಿರುಚೆಂದೂರೈ ಎಂಬ ಹಿಂದೂ ಪ್ರಧಾನ ಗ್ರಾಮದ ಮೇಲೆ ತನ್ನ ಸಂಪೂರ್ಣ ಹಕ್ಕು ಸಾಧಿಸಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಇಂಥ ಅಧಿಕಾರಕ್ಕೆ ಲಗಾಮು ಹಾಕುವ ಉದ್ದೇಶ ಮಸೂದೆಗಿದೆ.