ಬಿಜೆಪಿ ಬಳಿ ಭರ್ಜರಿ 7113 ಕೋಟಿ ರು.ಬ್ಯಾಲೆನ್ಸ್‌: ಕೈ ಬಳಿ 857 ಕೋಟಿ ರು.

| Published : Jan 29 2025, 01:30 AM IST

ಬಿಜೆಪಿ ಬಳಿ ಭರ್ಜರಿ 7113 ಕೋಟಿ ರು.ಬ್ಯಾಲೆನ್ಸ್‌: ಕೈ ಬಳಿ 857 ಕೋಟಿ ರು.
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿ ಬಳಿ ಭರ್ಜರಿ 7113 ಕೋಟಿ ರು. ಬ್ಯಾಂಕ್‌ ಬ್ಯಾಲೆನ್ಸ್‌ ಬಾಕಿ ಇದೆ. ಇದರ ನಂತರದಲ್ಲಿ ಕಾಂಗ್ರೆಸ್‌ ಬಳಿ 857 ಕೋಟಿ ರು. ಹಣ ಇದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ತಿಳಿಸಿವೆ. ಇದು 2024ರ ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಅಂಕಿ ಅಂಶಗಳಾಗಿದೆ.

ನವದೆಹಲಿ: ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿ ಬಳಿ ಭರ್ಜರಿ 7113 ಕೋಟಿ ರು. ಬ್ಯಾಂಕ್‌ ಬ್ಯಾಲೆನ್ಸ್‌ ಬಾಕಿ ಇದೆ. ಇದರ ನಂತರದಲ್ಲಿ ಕಾಂಗ್ರೆಸ್‌ ಬಳಿ 857 ಕೋಟಿ ರು. ಹಣ ಇದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ತಿಳಿಸಿವೆ. ಇದು 2024ರ ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಅಂಕಿ ಅಂಶಗಳಾಗಿದೆ.

ಆಡಳಿತಾರೂಢ ಬಿಜೆಪಿಯು 2023-24ನೇ ಸಾಲಿನಲ್ಲಿ 1754 ಕೋಟಿ ರು. ಖರ್ಚು ಮಾಡಿದ್ದು, 434.84 ಕೋಟಿ ರು. ವಿದ್ಯುನ್ಮಾನ ಮಾಧ್ಯಮ, 115.62 ಕೋಟಿ ರು. ಮುದ್ರಣ ಮಾಧ್ಯಮಕ್ಕೆ ಖರ್ಚು ಮಾಡಿದೆ. ಇನ್ನು ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ 174 ಕೋಟಿ ರು. ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವಾಗಿ 191.06 ಕೋಟಿ ರು. ವೆಚ್ಚ ಮಾಡಿದೆ. ಇದರ ಜೊತೆಗೆ ಸಭೆಗಳನ್ನು ನಡೆಸಲು 84.32 ಕೋಟಿ ರು. ಮೋರ್ಚಾ, ರ್‍ಯಾಲಿ, ಆಂದೋಲನ, ಕಾಲ್‌ ಸೆಂಟರ್‌ಗಳಿಗೆ 75.14 ಕೋಟಿ ರು. ವ್ಯಯಿಸಿದೆ. ಜೊತೆಗೆ ಹಾಲಿ ರದ್ದಾಗಿರುವ ಚುನಾವಣಾ ಬಾಂಡ್‌ನಿಂದ 1685.69 ಕೋಟಿ ರು. ಕೊಡುಗೆ ಬಂದಿದೆ ಎಂದು ಆಯೋಗಕ್ಕೆ ವರದಿ ಸಲ್ಲಿಸಿದೆ.

ಇತ್ತ ವಿಪಕ್ಷ ಕಾಂಗ್ರೆಸ್‌ ಬಳಿ 857 ಕೋಟಿ ರು. ಬ್ಯಾಂಕ್‌ ಬ್ಯಾಲೆನ್ಸ್‌ ಇದ್ದು, 614.67 ಕೋಟಿ ರು.ಗಳನ್ನು 2023-24ರಲ್ಲಿ ವ್ಯಯಿಸಿದೆ. ಅದರಲ್ಲಿ 207.94 ಕೋಟಿ ರು. ವಿದ್ಯುನ್ಮಾನ ಮಾಧ್ಯಮ, 43.73 ಕೋಟಿ ರು. ಮುದ್ರಣ ಮಾದ್ಯಮದ ಮೇಲೆ ಜಾಹೀರಾತಿಗಾಗಿ ಖರ್ಚು ಮಾಡಿದೆ. ಇನ್ನು ನಾಯಕರ ಸಂಚಾರಕ್ಕೆಂದು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಮೇಲೆ 62.65 ಕೋಟಿ ರು.ಗಳನ್ನು ವೆಚ್ಚ ಮಾಡಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ 238.55 ಕೋಟಿ ರು. ಸಹಾಯ ನೀಡಿದೆ. ಇದರ ಜೊತೆಗೆ ಪ್ರಚಾರ ವೆಚ್ಚವಾಗಿ 28.03 ಕೋಟಿ ರು., ಸಾಮಾಜಿಕ ಮಾಧ್ಯಮಕ್ಕೆ 79.78 ಕೋಟಿ ರು.ವೆಚ್ಚ ಮಾಡಿದೆ. ಇನ್ನು ರಾಹುಲ್‌ ಗಾಂಧಿ ಅವರ ಜನಪ್ರಿಯ ಭಾರತ್‌ ಜೋಡೋ ಮತ್ತು ಭಾರತ್‌ ಜೋಡೋ ನ್ಯಾಯ್‌ ಯಾತ್ರೆಗೆ 71.84 ಕೋಟಿ ರು.49.63 ಕೋಟಿ ರು. ಖರ್ಚಾಗಿದೆ ಎಂದು ಪಕ್ಷ ವರದಿಯಲ್ಲಿ ತೋರಿಸಿದೆ.

ಪಕ್ಷವು ಹಾಲಿ ರದ್ದಾಗಿರುವ ಚುನಾವಣಾ ಬಾಂಡ್‌ನಿಂದ 828.36 ಕೋಟಿ ರು. ಅನುದಾನ ಪಡೆದುಕೊಂಡಿದ್ದು, ಇದಲ್ಲದೇ ದಾನ, ಕೊಡುಗೆ, ನಿಧಿಯಿಂದ ಒಟ್ಟು 1129.67 ಕೋಟಿ ರು. ಹಣ ಪಡೆದುಕೊಂಡಿರುವುದಾಗಿ ಹೇಳಿದೆ.

ಮಿಕ್ಕ ಪಕ್ಷಗಳ ಖಚಾನೆ: ಇನ್ನು ಕಾಂಗ್ರೆಸ್‌ನ ಮೈತ್ರಿ ಪಕ್ಷ ಸಮಾಜವಾದಿ ಪಕ್ಷದ ಬಳಿ 394 ಕೋಟಿ ರು., ತಮಿಳುನಾಡಿನ ಡಿಎಂಕೆ ಬಳಿ 513 ಕೋಟಿ ರು., ಬಿಜೆಪಿ ಮೈತ್ರಿ ಪಕ್ಷ ಜೆಡಿಯು ಬಳಿ 173 ಕೋಟಿ ರು., ಜೆಡಿಎಸ್‌ ಬಳಿ 11.48 ಕೋಟಿ ರು. ಬ್ಯಾಲೆನ್ಸ್‌ ಇದೆ ಎಂದು ವರದಿಯಲ್ಲಿ ತಿಳಿಸಿವೆ.