ಮೋದಿ ಜತೆ ಚರ್ಚೆ ಮಾಡಲು ರಾಹುಲ್‌ ಯಾರು? ಬಿಜೆಪಿ ಕಿಡಿ

| Published : May 13 2024, 12:00 AM IST / Updated: May 13 2024, 04:56 AM IST

ಮೋದಿ ಜತೆ ಚರ್ಚೆ ಮಾಡಲು ರಾಹುಲ್‌ ಯಾರು? ಬಿಜೆಪಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅವರೇನು ಪ್ರಧಾನಿ ಅಭ್ಯರ್ಥಿಯಾ? ಕಾಂಗ್ರೆಸ್‌ ಅಧ್ಯಕ್ಷರಾ? ಎಂದು ನಿವೃತ್ತ ನ್ಯಾಯಾಧೀಶರು ಕರೆ ನೀಡಿದ್ದ ಬಹಿರಂಗ ಚರ್ಚೆಗೆ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಒಪ್ಪಿದರೆ ಅವರ ಜೊತೆ ಸಾರ್ವಜನಿಕ ಚರ್ಚೆಗೆ ಸಿದ್ಧವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ಮೋದಿ ಜೊತೆ ಚರ್ಚೆಗೆ ರಾಹುಲ್ ಯಾರು ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ಆ ವ್ಯಕ್ತಿಗೆ ಮೊದಲನೆಯದಾಗಿ ತನ್ನ ಭದ್ರಕೋಟೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿಯೇ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನ ಜೊತೆ ಸ್ಪರ್ಧಿಸುವ ಧೈರ್ಯವಿಲ್ಲ. ಹೀಗಾಗಿ ಮೊದಲು ಅವರು ತಮ್ಮ ಬಡಾಯಿಯಿಂದ ದೂರವಿರಬೇಕು. ಎರಡನೆಯದಾಗಿ ಪ್ರಧಾನಿ ಮೋದಿ ಜೊತೆ ಚರ್ಚಿಸಲು ಅವರು ಮೈತ್ರಿ ಕೂಟದ ಅಭ್ಯರ್ಥಿಯೇ’ ಎಂದು ಪ್ರಶ್ನಿಸಿದ್ದಾರೆ.

ಇನ್ನು ಬಿಜೆಪಿ ನಾಯಕ ಸುಧಾನ್ಷು ತ್ರಿವೇದಿ ಪ್ರತಿಕ್ರಿಯೆ ನೀಡಿ, ‘ಅಮೇಠಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೆ ಸಾಧ್ಯವಾಗದ ವ್ಯಕ್ತಿ ಸರ್ಕಾರ ರಚಿಸುವ ಬಗ್ಗೆ ಮಾತನಾಡುತ್ತಾರೆ. ಮೋದಿ ಜೊತೆ ಚರ್ಚೆ ನಡೆಸಲು ರಾಹುಲ್‌ ಗಾಂಧಿ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರೇ? ಕಾಂಗ್ರೆಸ್‌ ಅಧ್ಯಕ್ಷರೇ? ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಯಾರು ಎಂದು ಪ್ರಶ್ನಿಸಿದ್ದಾರೆ. ‘ಪ್ರಧಾನಿ ಮೋದಿ ಅವರು ಚರ್ಚೆ ಮಾಡುವುದಕ್ಕೆ ರಾಹುಲ್ ಗಾಂಧಿ ಯಾರು? ಇಂಡಿಯಾ ಮೈತ್ರಿ ಕೂಟವನ್ನು ಬಿಡಿ, ರಾಹುಲ್ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯೂ ಅಲ್ಲ. ಮೊದಲು ಕಾಂಗ್ರೆಸ್ ಸೋಲಿಗೆ ಅವರು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಾರಾ ಎಂದು ಹೇಳಲಿ. ಆ ಬಳಿಕ ಪ್ರಧಾನಿಯನ್ನು ಚರ್ಚೆಗೆ ಆಹ್ವಾನಿಸಲಿ’ ಎಂದಿದ್ದಾರೆ