ಸಾರಾಂಶ
ನವದೆಹಲಿ: ದೆಹಲಿಯ ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಮಲ್ಟಿಪ್ಲೆಕ್ಸ್ ಬಳಿಯ ಸಿಹಿ ಅಂಗಡಿಯ ಎದುರು ಗುರುವಾರ ಲಘು ಸ್ಫೋಟ ಸಂಭವಿಸಿದೆ. ಪರಿಣಾಮ ಘಟನಾ ಸ್ಥಳದ ಪಕ್ಕದಲ್ಲೇ ನಿಲ್ಲಿಸಿದ್ದ ತ್ರಿಚಕ್ರ ವಾಹನದ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಾಂಬ್‌ನಂತಹ ಸ್ಫೋಟದ ಬಗ್ಗೆ ಕರೆ ಬಂದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
‘ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ನಡೆದ ಸ್ಫೋಟವು ಕಳೆದ ತಿಂಗಳು ಇಲ್ಲಿನ ಸಿಆರ್‌ಪಿಎಫ್ ಶಾಲೆಯ ಗೋಡೆಯ ಬಳಿ ಸಂಭವಿಸಿದ ಸ್ಫೋಟದಂತೆಯೇ ಇದೆ. ಸಿಹಿ ಅಂಗಡಿಯ ಎದುರು ಸಂಭವಿಸಿದ ಈ ಸ್ಫೋಟ ಅತ್ಯಂತ ಕಡಿಮೆ ತೀವ್ರತೆಯದ್ದಾಗಿದೆ. ಆದರೆ ಈಗಲೇ ಆ ಘಟನೆಗೂ ಇದಕ್ಕೂ ಲಿಂಕ್ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.
ದಾಳಿಗೆ ಹೋದ ಇ.ಡಿ. ಅಧಿಕಾರಿಗಳ ಮೇಲೆ ದಾಳಿ
ನವದೆಹಲಿ: ಸೈಬರ್ ಅಪರಾಧ ಪ್ರಕರಣ ಸಂಬಂಧ ಫಾರ್ಮ್ ಹೌಸ್ ಒಂದರ ಮೇಲೆ ರೇಡ್ ಮಾಡಿ ಶೋಧಕಾರ್ಯ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳ ಮೇಲೆ ಆರೋಪಿಗಳು ದಾಳಿ ನಡೆಸಿದ ಘಟನೆ ಗುರುವಾರ ದೆಹಲಿ ಹೊರವಲಯದಲ್ಲಿ ನಡೆದಿದೆ.
ಪಿವೈವೈಪಿಎಲ್ ಆ್ಯಪ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಬಿಜ್ವಾಸನ್ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದ ವೇಳೆ ಇ.ಡಿ ಅಧಿಕಾರಿಗಳ ಮೇಲೆ ಆರೋಪಿಗಳಾದ ಆಶೋಕ್ ಶರ್ಮಾ ಹಾಗೂ ಆತನ ತಂಡ ದಾಳಿ ನಡೆಸಿದೆ.
ಈ ವೇಳೆ ಒಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಶೋಧ ಮುಂದುವರೆಸಿದ್ದಾರೆ.ಅಶೋಕ್ ಮತ್ತು ಆತನ ತಂಡ ಕ್ಯುಆರ್ ಕೋಡ್ ವಂಚನೆ, ನಕಲಿ ಸಂದೇಶ ರವಾನೆ, ಪಾರ್ಟ್-ಟೈಮ್ ಕೆಲಸದ ಆಮಿಷ ಸೇರಿದಂತೆ ಹಲವು ಸೈಬರ್ ಅಪರಾಧ ನಡೆಸುತ್ತಿತ್ತು. ಹೀಗೆ ನಡೆಸಿದ ವಂಚನೆ ಮೂಲಕ ಸಂಗ್ರಹಿಸಿದ ಹಣವನ್ನು ನಕಲಿ ಖಾತೆಗಳಿಗೆ ಜಮಾ ಮಾಡಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ತೆಗೆಯಲಾಗುತ್ತಿತ್ತು. ನಂತರ ಇದನ್ನು ಯುಎಇ ಮೂಲದ ಪಿವೈವೈಪಿಎಲ್ ಆ್ಯಪ್ ಕ್ರಿಪ್ಟೋ ಕರೆನ್ಸಿ ಖರೀದಿಸಲು ಬಳಸುತ್ತಿತ್ತು.