10, 12ನೇ ತರಗತಿಗೆ 2 ಬೋರ್ಡ್‌ ಪರೀಕ್ಷೆ

| Published : Feb 21 2024, 02:06 AM IST / Updated: Feb 21 2024, 08:04 AM IST

ಸಾರಾಂಶ

2025-26ರ ಶೈಕ್ಷಣಿಕ ವರ್ಷದಿಂದ 10 ಮತ್ತು 12ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷಾ ಪ್ರಕ್ರಿಯೆ ಜಾರಿಯಾಗಲಿದೆ. 2 ಪರೀಕ್ಷೆಯಲ್ಲಿನ ಉತ್ತಮ ಅಂಕ ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಪಿಟಿಐ ರಾಯ್‌ಪುರ

2025-26ರ ಶೈಕ್ಷಣಿಕ ವರ್ಷದಿಂದ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಹಾಜರಾಗುವ ಆಯ್ಕೆಗಳನ್ನು ಪಡೆಯುತ್ತಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ಪಿಎಂ ಶ್ರೀ (ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಉದ್ದೇಶಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವುದು ಒಂದಾಗಿದೆ.

ಹೀಗಾಗಿ ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಎರಡು ಬಾರಿ ಹಾಜರಾಗಲು ಅವಕಾಶ ಪಡೆಯುತ್ತಾರೆ. ಎರಡೂ ಪರೀಕ್ಷೆಗಳಲ್ಲಿ ಹಾಜರಾದ ನಂತರ ಪಡೆದ ಅತ್ಯುತ್ತಮ ಅಂಕಗಳನ್ನು ಇಟ್ಟುಕೊಳ್ಳಬಹುದು ಎಂದರು.

ಸರ್ಕಾರ ಕಳೆದ ವರ್ಷವೇ ಘೋಷಿಸಿರುವ ಪ್ರಕಾರ, ಬೋರ್ಡ್ ಪರೀಕ್ಷೆಗಳು ವರ್ಷಕ್ಕೆ 2 ಬಾರಿ ನಡೆಯಲಿವೆ. ವಿದ್ಯಾರ್ಥಿಗಳು ಒಂದೇ ಪರೀಕ್ಷೆಗೆ ಹಾಜರಾಗಬಹುದು. 

ಬೇಕಿದ್ದರೆ ಎರಡೂ ಪರೀಕ್ಷೆಗಳಿಗೂ ಹಾಜರಾಗಬಹುದು. ಎರಡರಲ್ಲಿ ಯಾವ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿರುತ್ತಾರೋ ಅದನ್ನು ಉಳಿಸಿಕೊಳ್ಳುವ ಅವಕಾಶ ಅವರಿಗೆ ಇರುತ್ತದೆ. 

ಇದೇ ವೇಳೆ, ಪ್ರತಿ ವರ್ಷ ಶಾಲೆಯಲ್ಲಿ 10 ಬ್ಯಾಗ್ ರಹಿತ ದಿನಗಳನ್ನು ಪರಿಚಯಿಸುವುದನ್ನು ಒತ್ತಿ ಹೇಳಿದ ಸಚಿವರು, ಕಲೆ, ಸಂಸ್ಕೃತಿ ಮತ್ತು ಕ್ರೀಡೆಯೊಂದಿಗೆ ವಿದ್ಯಾರ್ಥಿಗಳು ತೊಡಗಿಕೊಳ್ಳಲು ಇದರಿಂದ ಅವಕಾಶ ಲಭಿಸಲಿದೆ ಎಂದರು.