ಸಾರಾಂಶ
ನವದೆಹಲಿ: ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನ್ನು ಪ್ರಧಾನಿ ಹೊಗಳಿದ್ದು ‘ಈ ಬಜೆಟ್ ಉತ್ತಮ ಬೆಳವಣಿಗೆ ಮತ್ತು ಉಜ್ವಲ ಭವಿಷ್ಯವನ್ನು ಸೂಚಿಸುತ್ತದೆ’ ಎಂದು ಬಣ್ಣಿಸಿದ್ದಾರೆ.
‘ಭಾರತವನ್ನು ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಬಜೆಟ್ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕುತ್ತದೆ’ ಎಂದು ಶ್ಲಾಘಿಸಿದ್ದಾರೆ.
ಅಲ್ಲದೇ, ಬಜೆಟ್‌ನಲ್ಲಿ ಘೋಷಣೆಯಾದ ತಮ್ಮ ಸರ್ಕಾರದ ಹಲವು ಮಹತ್ವಕಾಂಕ್ಷಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಯುವ ಸಮುದಾಯ, ಹಿಂದುಳಿದ ಸಮುದಾಯ, ಮಹಿಳೆಯರು ಮತ್ತು ಮಧ್ಯಮ ವರ್ಗ, ಉತ್ಪಾದನಾ ಮತ್ತು ಮೂಲಭೂತ ಸೌಕರ್ಯಗಳನ್ನು ಗುರಿಯಾಗಿಸಿಕೊಂಡಿರುವ ಈ ಬಜೆಟ್ ಕೋಟಿಗಟ್ಟಲೇ ಉದ್ಯೋಗ ಸೃಷ್ಟಿಸುತ್ತದೆ ಎನ್ನುವ ವಿಶ್ವಾಸವನ್ನು ಮೋದಿ ವ್ಯಕ್ತ ಪಡಿಸಿದರು.
ಸಮಾಜದ ಎಲ್ಲ ಸ್ತರದ ಉನ್ನತಿ ಮತ್ತು ಸಬಲೀಕರಣದ ಗುರಿಯನ್ನು ಈ ಬಜೆಟ್ ಹೊಂದಿದೆ ಎಂದಿರುವ ಪ್ರಧಾನಿ, ‘ಈ ಬಜೆಟ್‌ನಲ್ಲಿನ ಉದ್ಯೋಗ ಸಂಬಂಧಿತ ಪ್ರೋತ್ಸಾಹ ಯೋಜನೆಯು ಕೋಟಿಗಟ್ಟಲೇ ಉದ್ಯೋಗವನ್ನು ಸೃಷ್ಟಿಸುತ್ತದೆ. ಉದ್ಯೋಗಕ್ಕೆ ಸೇರುವ ಯುವ ಸಮುದಾಯದ ಮೊದಲ ತಿಂಗಳ ಸಂಬಳವನ್ನು ಸರ್ಕಾರವೇ ಭರಿಸುತ್ತದೆ. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ ನೆರವು ಮತ್ತು 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದರು. ಅಲ್ಲದೇ ಈ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಕೌಶ್ಯಲಾಭಿವೃದ್ಧಿಗೆ ವಿಶೇಷ ಆದ್ಯತೆಗಳನ್ನು ನೀಡಲಾಗಿದೆ ಎಂದು ಪ್ರಸ್ತಾಪಿಸಿದರು.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾಗಿರುವ ಮುದ್ರಾ ಯೋಜನೆ ಬಗ್ಗೆಯೂ ಮೋದಿ ಮಾತನಾಡಿದ್ದು,‘ ಮುದ್ರಾ ಯೋಜನೆಯಡಿಯಲ್ಲಿ ನೀಡುವ ಸಾಲವನ್ನು 10 ಲಕ್ಷದಿಂದ 20 ಲಕ್ಷದವರೆಗೆ ಹೆಚ್ಚಿಸಿರುವುದರಿಂದ ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ, ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದ ಸಮುದಾಯದವರಿಗೆ ಮತ್ತು ವಂಚಿತರಿಗೆ ನೆರವಾಗಲಿದೆ’ ಎಂದರು.
ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 25 ಕೋಟಿಗೂ ಅಧಿಕ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಇದೇ ವೇಳೆ ಹೇಳಿರುವ ಮೋದಿ, ‘ಈ ಬಾರಿ ಹಿಂದಿಗಿಂತಲೂ ಮಧ್ಯಮ ವರ್ಗದ ಮಂದಿಯ ಸಬಲೀಕರಣಕ್ಕೆ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ . ಇದರ ಜೊತೆಗೆ ಬುಡಕಟ್ಟು ಸಮುದಾಯ, ದಲಿತರು ಮತ್ತು ಹಿಂದುಳಿದ ವರ್ಗದ ಅಭಿವೃದ್ಧಿಗೆ ಸದೃಢ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಇದು ಆರ್ಥಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವೃದ್ಧಿಸಲು ನೆರವಾಗಲಿದೆ. ಬಜೆಟ್‌ನ ಪೂರ್ವೋದಯ ಕಲ್ಪನೆಯಡಿಯಲ್ಲಿ ದೇಶದ ಪೂರ್ವ ಭಾಗವನ್ನು ಅಭಿವೃದ್ಧಿ ಮಾಡುವುದರಿಂದ ಹೊಸ ವೇಗ ಮತ್ತು ಶಕ್ತಿ ಸಿಗಲಿದೆ.ಬಡ ಕುಟುಂಬದ 3 ಕೋಟಿ ಜನರಿಗೆ ವಸತಿ ಮತ್ತು ಜಂಜಾಟೀಯ ಉನ್ನತ್ ಗ್ರಾಮ ಯೋಜನೆಯಡಿಯಲ್ಲಿ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ’ ಎಂದರು
ದೇಶದ ರೈತರಿಗೆ ಘೋಷಣೆಯಾಗಿರುವ ಯೋಜನೆಗಳ ಬಗ್ಗೆಯೂ ಮೋದಿ ಪ್ರಸ್ತಾಪಿಸಿದ್ದಾರೆ. ‘ದೇಶವು ಅತಿದೊಡ್ಡ ಧಾನ್ಯ ಸಂಗ್ರಹ ಘಟಕವನ್ನು ಸ್ಥಾಪಿಸಿದೆ. ತರಕಾರಿ ಉತ್ಪಾದನಾ ವಿಭಾಗಗಳನ್ನು ಮಧ್ಯಮ ವರ್ಗ ಮತ್ತು ರೈತರಿಗೆ ನೆರವಾಗಲು ಆರಂಭಿಸಲಾಗಿದೆ. ಭಾರತವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ’ ಎಂದರು.
ಈ ಬಜೆಟ್‌ನಲ್ಲಿ ಉತ್ಪಾದನಾ ಘಟಕ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ ಎಂದಿರುವ ನಮೋ, ಹೆದ್ದಾರಿಗಳು, ಜಲ ಯೋಜನೆಗಳು, ಇಂಧನ ಯೋಜನೆಗಳಿಗೆ ನೀಡಿರುವ ಆದ್ಯತೆಗಳ ಬಗ್ಗೆಯೂ ಪ್ರಸ್ತಾಪಿಸಿದರು. ‘ಎಂಎಸ್‌ಎಂಇ ಮತ್ತು ಸಣ್ಣ ಉದ್ದಿಮೆದಾರರಿಗೆ ಬೆಳವಣಿಗೆಗೆ ಹೊಸ ಹಾದಿಯನ್ನು ಕಲ್ಪಿಸಲಿದೆ . ಉತ್ಪಾದನೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಆರ್ಥಿಕತೆ ಅಭಿವೃದ್ಧಿಗೆ ಇದು ಉತ್ತೇಜನ ನೀಡುತ್ತದೆ’ ಎಂದರು.ಹೊಸದಾಗಿ ಉದ್ದಿಮೆ ಆರಂಭಿಸುವ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ, ಬಾಹ್ಯಕಾಶದ ಆರ್ಥಿಕತೆಯನ್ನು ಜೀವಂತಗೊಳಿಸಲು, ಸಾವಿರ ಕೋಟಿ ಕಾರ್ಪಸ್ ಫಂಡ್ ಮತ್ತು ಏಂಜೆಲ್ ತೆರಿಗೆ ರದ್ಧತಿ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಜೊತೆಗೆ 12 ಹೊಸ ಕೈಗಾರಿಕಾ ನೋಡ್‌ಗಳು, ಹೊಸ ಸ್ಯಾಟಲೈಟ್ ಪಟ್ಟಣಗಳು ,14 ಸಾರಿಗೆ ಆಧಾರಿತ ನಗರಗಳ ಬಗ್ಗೆಯೂ ಮೋದಿ ಶ್ಲಾಘಿಸಿದ್ದಾರೆ.