ಸಾರಾಂಶ
ನವದೆಹಲಿ: ಜಗತ್ತಿನಾದ್ಯಂತ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಸದ್ಯದ ಕಳವಳಕಾರಿ ಸಂಗತಿ ಏನೆಂದರೆ ಆಟವಾಡಲು ಶಟಲ್‌ಗಳೇ ಸಿಗದೆ ಹೋಗುವ ಪರಿಸ್ಥಿತಿ ಬರಬಹುದು. ಭಾರತದ ಪ್ರತಿಷ್ಠಿತ ಪುಲ್ಲೇಲಾ ಗೋಪಿಚಂದ್ ಅಕಾಡೆಮಿ ಸೇರಿ ವಿಶ್ವದ ಕೆಲ ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಕೇವಲ ಎರಡು ವಾರಕ್ಕೆ ಆಗುವಷ್ಟು ಶಟಲ್‌ಗಳು ಮಾತ್ರ ಉಳಿದಿವೆಯಂತೆ. ಶಟಲ್ ಕೊರತೆ ಆಗಲು ಚೀನಾದಲ್ಲಿ ಜನ ಬಾತುಕೋಳಿ, ಹೆಬ್ಬಾತು ಬಿಟ್ಟು ಹಂದಿ ಮಾಂಸವನ್ನು ಹೆಚ್ಚಾಗಿ ಸೇವಿಸುತ್ತಿರುವುದೇ ಕಾರಣ ಎಂದರೆ ನಂಬುತ್ತೀರಾ? ನಂಬಲೇಬೇಕು.
ಬ್ಯಾಡ್ಮಿಂಟನ್‌ನಲ್ಲಿ ಬಳಸುವ ಶಟಲ್ ತಯಾರಿಸಲು ಹೆಬ್ಬಾತು (ಗೂಸ್) ಹಾಗೂ ಬಾತುಕೋಳಿಯ ಪುಕ್ಕಗಳನ್ನು ಬಳಸಲಾಗುತ್ತದೆ. ಚೀನಾದಲ್ಲಿ ಸಂಪ್ರದಾಯಿಕವಾಗಿ ಈ ಎರಡರ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಕಾರಣ, ಅಲ್ಲಿನ ರೈತರು ಹೆಚ್ಚಾಗಿ ಸಾಕಣಿಕೆ ಮಾಡುತ್ತಾರೆ. ಚೀನಿಯರಿಗೆ ಹಂದಿ ಮಾಂಸ ಎಂದರೆ ಎಲ್ಲಿಲ್ಲದ ಪ್ರೀತಿ. ಜಗತ್ತಿನಲ್ಲಿ ಅತಿಹೆಚ್ಚು ಹಂದಿ ಮಾಂಸ ಸೇವಿಸುವ, ರಫ್ತು ಮಾಡುವ ದೇಶ ಚೀನಾ. ಕಳೆದ 6 ತಿಂಗಳಿಂದ ಹಂದಿ ಮಾಂಸದ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ಜನ ಹೆಚ್ಚಾಗಿ ಹಂದಿ ಮಾಂಸವನ್ನೇ ಸೇವಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ರೈತರು, ಬಾತುಕೋಳಿ ಹಾಗೂ ಹೆಬ್ಬಾತು ಸಾಕುವುದನ್ನು ನಿಲ್ಲಿಸಿ ಹಂದಿ ಸಾಕಣೆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಶಟಲ್ ಕೊರತೆ ಆಗಲು ಇದೇ ಕಾರಣ.
ಒಂದು ಶಟಲ್ ತಯಾರಿಸಲು 16 ಪುಕ್ಕಗಳು ಬೇಕಾಗುತ್ತವೆ. ಸಣ್ಣ ಪುಟ್ಟ ಟೂರ್ನಿಗಳಲ್ಲಿ, ಹವ್ಯಾಸಕ್ಕಾಗಿ ಬ್ಯಾಡ್ಮಿಂಟನ್ ಆಡುವವರ ಬಳಕೆಗೆ ಬಾತುಕೋಳಿಯ ಪುಕ್ಕದಿಂದ ತಯಾರಿಸಿದ ಶಟಲ್‌ಗಳು ಸಾಕು. ಆದರೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹೆಬ್ಬಾತುವಿನ ಪುಕ್ಕದಿಂದ ತಯಾರಿಸಿದ ಶಟಲ್ ಬಳಕೆಯಾಗುತ್ತದೆ. ಅಂ.ರಾ. ಸಿಂಗಲ್ಸ್ ಪಂದ್ಯವೊಂದರಲ್ಲಿ ಸಾಮಾನ್ಯವಾಗಿ 2 ಡಜನ್ ಶಟಲ್‌ಗಳು ಬಳಕೆಯಾಗುತ್ತವೆ.
ಶಟಲ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (ಬಿಡ್ಲ್ಯುಎಫ್), ಶಟಲ್ ತಯಾರಿಕ ಸಂಸ್ಥೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದೆ. ಆದರೆ, ಪುಕ್ಕಗಳ ಕೊರತೆಯಿಂದಾಗಿ ಅಗತ್ಯಕ್ಕೆ ತಕ್ಕಂತೆ ಶಟಲ್ ಪೂರೈಕೆ ಕಷ್ಟ ಎಂದು ತಯಾರಿಕ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ, ಶಟಲ್‌ಗಳ ಬೆಲೆ ಶೇ. 30ರಿಂದ 40ರಷ್ಟು ಹೆಚ್ಚಳವಾಗಿದೆ.
ಸಿಂಥೆಟಿಕ್ ಶಟಲ್ ಪರಿಹಾರ?
ಭವಿಷ್ಯದಲ್ಲಿ ಬಿಡಬ್ಲ್ಯುಎಫ್ ಸಿಂಥೆಟಿಕ್ ಶಟಲ್‌ಗಳ ಬಳಕೆಯ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸುತ್ತಿದೆ. ‘ಭವಿಷ್ಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಬಾರದು. ಆಟಗಾರರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಕಳೆದ 10 ವರ್ಷಗಳಿಂದ ಈ ಬಗ್ಗೆ ಯೋಜನೆ ರೂಪಿಸುವಲ್ಲಿ ಬದ್ಧವಾಗಿದ್ದೇವೆ’ ಎಂದಿದೆ. ಕೆಲ ಸಮಯಗಳಿಂದ ಸಿಂಥೆಟಿಕ್ ಶಟಲ್‌ಗಳ ಪ್ರಯೋಗ ನಡೆಯುತ್ತಿದೆ. ಈಗಾಗಲೇ ಹಲವು ಉತ್ಪಾದಕರು ತಮ್ಮ ಪರಿಸರ ಸ್ನೇಹಿ ಸಿಂಥೆಟಿಕ್ ಶಟಲ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದಾರೆ.
* ಜಗತ್ತಿನಲ್ಲಿ ಅತಿಹೆಚ್ಚು ಹಂದಿ ಮಾಂಸ ಸೇವಿಸುವ, ಮಾಂಸವನ್ನು ರಫ್ತು ಮಾಡುವ ದೇಶ ಚೀನಾ
* ಕಳೆದ 6 ತಿಂಗಳಿಂದ ಚೀನಾದಲ್ಲಿ ಹಂದಿ ಮಾಂಸದ ಬೆಲೆ ಭಾರೀ ಕುಸಿತ, ಇದರಿಂದಾಗಿ ಮಾಂಸ ಸೇವನೆ ಹೆಚ್ಚಳ
* ಹಂದಿ ಮಾಂಸ ಸೇವನೆ ಹೆಚ್ಚಾದ ಪರಿಣಾಮ ಬಾತುಕೋಳಿ, ಹೆಬ್ಬಾತು ಸಾಕುವ ರೈತರ ಸಂಖ್ಯೆ ಕುಸಿತ
* ಶಟಲ್‌ಕಾಕ್ ತಯಾರಿಸಲು ಬಾತುಕೋಳಿ, ಹೆಬ್ಬಾತುಗಳ ಪುಕ್ಕ ಬಳಕೆ
* ಪ್ರತಿ ಶಟಲ್ ತಯಾರಿಕೆಗೆ 16 ಪುಕ್ಕ ಅಗತ್ಯ. ಕಡಿಮೆ ಗುಣಮಟ್ಟದ ಶಟಲ್‌ಗೆ ಬಾತುಕೋಳಿಯ, ಅಂ.ರಾ. ಗುಣಮಟ್ಟದ ಶಟಲ್‌ಗೆ ಹೆಬ್ಬಾತಿನ ಪುಕ್ಕ ಬಳಕೆ
* ವಿಶ್ವದ ಪ್ರತಿಷ್ಠಿತ ಶಟಲ್ ತಯಾರಿಕ ಸಂಸ್ಥೆಗಳು, ಅವುಗಳ ಫ್ಯಾಕ್ಟರಿಗಳು ಇರುವುದು ಚೀನಾದಲ್ಲೇ
* ಅಗತ್ಯಕ್ಕೆ ತಕ್ಕಂತೆ ಪುಕ್ಕ ಪೂರೈಕೆ ಆಗದ ಹಿನ್ನೆಲೆ ಶಟಲ್‌ಗಳ ತಯಾರಿಕೆ ತೀವ್ರ ಕುಸಿತ, ಜಾಗತಿಕ ಬ್ಯಾಡ್ಮಿಂಟನ್‌ನಲ್ಲಿ ಕಳವಳ
* ಚೀನಾ ಸೇರಿ ಜಗತ್ತಿನಾದ್ಯಂತ ಶಟಲ್‌ಕಾಕ್‌ಗಳ ಬೆಲೆ 30-40% ಏರಿಕೆ
* ಅಂ.ರಾ. ಟೂರ್ನಿಯ ಸಿಂಗಲ್ಸ್ ಪಂದ್ಯವೊಂದರಲ್ಲಿ ಕನಿಷ್ಠ 2 ಡಜನ್ ಶಟಲ್ ಬಳಕೆಯಾಗುತ್ತೆ