ಸಾರಾಂಶ
ನವದೆಹಲಿ: ಹಕ್ಕುಸ್ವಾಮ್ಯದ ಕುರಿತು ತೋರಿರುವ ಬಿಕ್ಕಟ್ಟಿನಲ್ಲಿ ನ್ಯಾಯಾಲಯ ಸೂಕ್ತ ಆದೇಶ ಕೊಡುವವರೆಗೂ 1700 ಕೋಟಿ ರು. (200 ಮಿಲಿಯನ್ ಡಾಲರ್) ಹಣವನ್ನು ಬಳಸಬಾರದೆಂದು ಬೆಂಗಳೂರು ಕಂಪನಿ ಕಾನೂನು ನ್ಯಾಯಾಧಿಕರಣ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಖ್ಯಾತ ಶಿಕ್ಷಣ ತರಬೇತಿ ಸಂಸ್ಥೆಯಾಗಿರುವ ಬೈಜೂಸ್ ತನ್ನ ನೌಕರರಿಗೆ ಮಾರ್ಚ್ ತಿಂಗಳಲ್ಲಿ ಸಂಬಳ ನೀಡಲು ಸಾಧ್ಯವಿಲ್ಲ ಎಂಬುದಾಗಿ ಪತ್ರ ಬರೆದಿದೆ.
ಈ ಕುರಿತು ಹೇಳಿಕೆ ನೀಡಿರುವ ಬೈಜೂಸ್ ಮುಖ್ಯಸ್ಥ ಬೈಜು ರವೀಂದ್ರನ್ ‘ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ನಾಲ್ವರು ಹೂಡಿಕೆದಾರರು ಅವರ ಮೂಲ ಹೂಡಿಕೆಯ 8 ಪಟ್ಟು ಹಣ ಲಾಭವಾಗಿ ಪಡೆದಿದ್ದರೂ ತಮ್ಮ ಹಣವನ್ನು ಮರಳಿಸಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಹೂಡಿಕೆಯನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಇರಿಸಿ ಅದನ್ನು ಮುಂದಿನ ಆದೇಶದವರೆಗೆ ಬಳಸದಂತೆ ನ್ಯಾಯಾಲಯ ಫೆ.27ರಂದು ಸೂಚಿಸಿದ ಕಾರಣ ಸಂಬಳ ನೀಡಲು ಸಾಧ್ಯವಿಲ್ಲ’ ಎಂದು ಉಲ್ಲೇಖಿಸಿದ್ದಾರೆ.
ತುರ್ತು ಸಭೆ ಕರೆದಿದ್ದ ಬೈಜೂಸ್ ರವೀಂದ್ರನ್ ಮತ್ತು ಕುಟುಂಬವನ್ನು ನಿರ್ದೇಶಕ ಮಂಡಳಿಯಿಂದ ಕಿತ್ತೊಗೆಯುವಂತೆ ಇತ್ತೀಚೆಗೆ ತೀರ್ಮಾನಿಸಿತ್ತು.