ದೀದಿ ಸವಾಲು: ಹೈಕೋರ್ಟ್ ಜಡ್ಜ್‌ ಅಭಿಜಿತ್‌ ಗಂಗೂಲಿ ರಾಜಕೀಯಕ್ಕೆ!

| Published : Mar 04 2024, 01:16 AM IST / Updated: Mar 04 2024, 08:35 AM IST

Abhijith ganguli

ಸಾರಾಂಶ

ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ಸಂಘರ್ಷಕ್ಕೆ ಇಳಿಯುತ್ತಿದ್ದ ಕಾರಣಕ್ಕೆ ‘ಸಕ್ರಿಯ ರಾಜಕಾರಣಕ್ಕೆ ಬಂದುಬಿಡಿ’ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಹಾಕಿದ್ದ ಸವಾಲನ್ನು ಕೋಲ್ಕತಾ ಹೈಕೋರ್ಟ್‌ ನ್ಯಾಯಾಧೀಶ ಅಭಿಜಿತ್‌ ಗಂಗೂಲಿ ಸ್ವೀಕರಿಸಿದ್ದಾರೆ.

ಕೋಲ್ಕತಾ: ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ಸಂಘರ್ಷಕ್ಕೆ ಇಳಿಯುತ್ತಿದ್ದ ಕಾರಣಕ್ಕೆ ‘ಸಕ್ರಿಯ ರಾಜಕಾರಣಕ್ಕೆ ಬಂದುಬಿಡಿ’ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಹಾಕಿದ್ದ ಸವಾಲನ್ನು ಕೋಲ್ಕತಾ ಹೈಕೋರ್ಟ್‌ ನ್ಯಾಯಾಧೀಶ ಅಭಿಜಿತ್‌ ಗಂಗೂಲಿ ಸ್ವೀಕರಿಸಿದ್ದಾರೆ. 

ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮಂಗಳವಾರದಿಂದ ರಾಜಕೀಯ ಪ್ರವೇಶಿಸುವುದಾಗಿ ಅವರು ಘೋಷಣೆ ಮಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಸಿಪಿಎಂ ಸೇರುವ ಆಯ್ಕೆಗಳು ಮುಕ್ತವಾಗಿವೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.

ಆದರೆ, ರಾಜಕೀಯ ಪ್ರವೇಶಿಸುವಂತೆ ಸದಾ ಸವಾಲು ಹಾಕುತ್ತಿದ್ದ ತೃಣಮೂಲ ಕಾಂಗ್ರೆಸ್ಸಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಗಂಗೂಲಿ ಅವರು ತಿಳಿಸಿದ್ದಾರೆ.

ಶ್ರೀಸಾಮಾನ್ಯಣ ಏಳ್ಗೆ ಹಾಗೂ ತಳಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ರಾಜಕೀಯ ರಂಗವನ್ನು ಪ್ರವೇಶಿಸಲು ಉದ್ದೇಶಿಸಿದ್ದೇನೆ. ಆ ಪ್ರಯಾಣ ಮಂಗಳವಾರದಿಂದ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ನ್ಯಾ। ಗಂಗೂಲಿ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಅಲ್ಲದೆ ಸರ್ಕಾರದ ವಿರುದ್ಧ ಪದೇ ಪದೇ ಚಾಟಿ ಬೀಸುತ್ತಿದ್ದರು. 

ಹೀಗಾಗಿ ಟಿಎಂಸಿ ವಕ್ತಾರರು ಸಕ್ರಿಯ ರಾಜಕೀಯಕ್ಕೆ ಇಳಿಯುವಂತೆ ಅವರಿಗೆ ಸವಾಲು ಹಾಕಿದ್ದರು. ಅದನ್ನು ನ್ಯಾಯಾಧೀಶರು ಗಂಭೀರವಾಗಿ ಸ್ವೀಕರಿಸಿದ್ದಾರೆ. ನ್ಯಾ। ಗಂಗೂಲಿ ಅವರ ಸೇವಾವಧಿ ಇನ್ನು 5 ತಿಂಗಳು ಇದ್ದು ಆಗಸ್ಟ್‌ಗೆ ಮುಗಿಯಲಿದೆ.