ಅಪರಿಚಿತ ಮಹಿಳೆಯನ್ನು ಡಾರ್ಲಿಂಗ್‌ ಎನ್ನುವುದು ಅಪರಾಧ: ಹೈಕೋರ್ಟ್‌

| Published : Mar 04 2024, 01:16 AM IST

ಸಾರಾಂಶ

ಅಪರಿಚಿತ ಮಹಿಳೆಯರಿಗೆ ಡಾರ್ಲಿಂಗ್‌ ಎಂದು ಕರೆಯುವುದು ಅಪರಾಧ ಎಂಬುದಾಗಿ ಕಲ್ಕತಾ ಹೈಕೋರ್ಟ್‌ ತಿಳಿಸಿದೆ.

ಕೋಲ್ಕತ್ತ: ಡಾರ್ಲಿಂಗ್‌ ಎಂಬ ಪದ ಲೈಂಗಿಕತೆಯ ಸೂಚಕವಾಗಿದ್ದು, ಅಪರಿಚಿತ ಮಹಿಳೆಯರನ್ನು ಈ ರೀತಿಯಲ್ಲಿ ಕರೆಯುವುದು ಅಪರಾಧ ಎಂದು ಕಲ್ಕತಾ ಹೈಕೋರ್ಟ್‌ ಹೇಳಿದೆ.

9 ವರ್ಷಗಳ ಹಿಂದೆ ದುರ್ಗಾಪೂಜೆ ವೇಳೆ ಅಂಡಮಾನ್‌ನ ಮಾಯಾಬಂದರ್‌ ಠಾಣೆ ವ್ಯಾಪ್ತಿಯಲ್ಲಿ ಕೆಲ ವ್ಯಕ್ತಿಗಳು ತೊಂದರೆ ಕೊಡುತ್ತಿದ್ದಾರೆ ಎಂಬ ದೂರು ಆಧರಿಸಿ ಪೊಲೀಸರ ತಂಡ ಅಲ್ಲಿ ತೆರಳಿತ್ತು. ಈ ವೇಳೆ ಅಲ್ಲಿ ಕುಡಿದ ಮತ್ತಿನಲ್ಲಿದ್ದ ಜಾನಕ್‌ ರಾಮ್‌ ಎಂಬ ವ್ಯಕ್ತಿ, ‘ಏನ್ ಡಾರ್ಲಿಂಗ್‌ ಚಲನ್‌ ನೀಡಲು ಬಂದಿದ್ದೀಯಾ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದ.

ಈ ಬಗ್ಗೆ ಮಹಿಳಾ ಪೇದೆ ದೂರು ದಾಖಲಿಸಿದ್ದಳು. ಈ ಕುರಿತು ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ‘ಡಾರ್ಲಿಂಗ್‌ ಎಂದು ಕರೆಯುವುದು ಸೆಕ್ಷನ್‌ 354 ಎ (1) (4) ಅಡಿ ಲೈಂಗಿಕ ಸೂಚಕ ಎಂದು ಪರಿಗಣಿಸಲಾಗಿದ್ದು ಅಪರಾಧವಾಗಿದೆ’ ಎಂದು ಹೇಳಿ 3 ತಿಂಗಳು ಶಿಕ್ಷೆ ವಿಧಿಸಿತ್ತು. ಇದನ್ನು ರಾಮ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ ಅಧೀನ ನ್ಯಾಯಾಲಯದ ತೀರ್ಪುನ್ನು ಎತ್ತಿಹಿಡಿದಿದೆ. ಆದರೆ ಶಿಕ್ಷೆ ಪ್ರಮಾಣವನ್ನು 3ರಿಂದ 1 ತಿಂಗಳಿಗೆ ಇಳಿಸಿದೆ.