ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕರೂರು ಕಾಲ್ತುಳಿತಕ್ಕೆ 41 ಮಂದಿ ಬಲಿ ಪ್ರಕರಣ ಸಂಬಂಧ ನಟ, ತಮಿಳಿಗ ವೆಟ್ರಿ ಕಳಗಂ(ಟಿವಿಕೆ)ಪಕ್ಷದ ಮುಖ್ಯಸ್ಥ ವಿಜಯ್‌ಗೆ ಸಿಬಿಐ ನೋಟಿಸ್ ನೀಡಿದ್ದು, ಜ.12ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದೆ.
ನವದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕರೂರು ಕಾಲ್ತುಳಿತಕ್ಕೆ 41 ಮಂದಿ ಬಲಿ ಪ್ರಕರಣ ಸಂಬಂಧ ನಟ, ತಮಿಳಿಗ ವೆಟ್ರಿ ಕಳಗಂ(ಟಿವಿಕೆ)ಪಕ್ಷದ ಮುಖ್ಯಸ್ಥ ವಿಜಯ್‌ಗೆ ಸಿಬಿಐ ನೋಟಿಸ್ ನೀಡಿದ್ದು, ಜ.12ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದೆ. ಸೆ.27ರಂದು ವಿಜಯ್ ಪಾಲ್ಗೊಂಡಿದ್ದ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು.
ಆ ಬಳಿಕ ಸುಪ್ರೀಂ ಆದೇಶದ ಮೇರೆಗೆ ಎಸ್‌ಐಟಿಯಿಂದ ಪ್ರಕರಣದ ತನಿಖೆ ಸಿಬಿಐಗೆ ವರ್ಗವಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಟಿವಿಕೆಯ ಹಲವು ನಾಯಕರನ್ನು ವಿಚಾರಣೆ ನಡೆಸಿತ್ತು. ಅದರ ಭಾಗವಾಗಿಯೇ ಜ.12ರಂದು ವಿಜಯ್ ವಿಚಾರಣೆ ನಡೆಯಲಿದೆ. ಆ ಬಳಿಕ ಸಿಬಿಐ ಜಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದೆ.
ಆಧಾರ್ ಪಿವಿಸಿ ಕಾರ್ಡ್ ಶುಲ್ಕ 25 ರು. ಹೆಚ್ಚಳ: ಹೊಸ ದರ 75 ರುಪಾಯಿ
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ಯು ನಾಗರಿಕರು ಸಾಮಾನ್ಯ ಆಧಾರ್‌ಕಾರ್ಡ್ ಬದಲು ಪಿವಿಸಿ ಆಧಾರ್ ಕಾರ್ಡ್ ಪಡೆಯಲಿರುವ ಶುಲ್ಕದಲ್ಲಿ ಬದಲಾವಣೆ ಮಾಡಿದ್ದು, 50 ರು.ನಿಂದ 75 ರು.ಗೆ ಹೆಚ್ಚಿಸಿದೆ. ಹೊಸ ನಿಯಮವು ಜ.1ರಿಂದಲೇ ಜಾರಿಗೆ ಬಂದಿದೆ. ಗ್ರಾಹಕರು ಪಾಕೆಟ್ ಗಾತ್ರದಲ್ಲಿ ಆಧಾರ್ ಮಾಡಿಕೊಳ್ಳಬೇಕೆಂದರೆ ಹಿಂದಿಗಿಂತ 25 ರು. ಹೆಚ್ಚುವರಿ ಪಾವತಿಸಬೇಕು. ಇದು ಕೇಂದ್ರ 2020ರಲ್ಲಿ ಪಿವಿಸಿ ಕಾರ್ಡ್ ಜಾರಿಗೆ ತಂದ ಬಳಿಕದ ಮೊದಲ ದರ ಏರಿಕೆ. ಪರಿಷ್ಕೃತ ಶುಲ್ಕಗಳು myAadhaar ವೆಬ್‌ಸೈಟ್ ಅಥವಾ mAadhaar ಮೊಬೈಲ್ ಅಪ್ಲಿಕೇಶನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸಲಿದೆ.
ಯುಪಿ ಕರಡು ಮತಪಟ್ಟಿ ಪ್ರಕಟ: 2.89 ಕೋಟಿ ಹೆಸರು ಡಿಲೀಟ್
ಲಖನೌ: ಉತ್ತರಪ್ರದೇಶದಲ್ಲಿ ನಡೆದ ವಿಶೇಷ ಮತಪಟ್ಟಿ ಪರಿಷ್ಕರಣೆಯ ಕರಡು ಮತಪಟ್ಟಿ ಪ್ರಕಟವಾಗಿದೆ. ಇದರಲ್ಲಿ ಹಿಂದಿದ್ದ 15.44 ಕೋಟಿ ಮತದಾರರ ಪೈಕಿ 2.89 ಕೋಟಿ ಹೆಸರು ತೆಗೆದು ಹಾಕಲಾಗಿದ್ದು, 12.55 ಕೋಟಿ ಮತದಾರರನ್ನು ಉಳಿಸಿಕೊಳ್ಳಲಾಗಿದೆ.
ರಾಜ್ಯ ಚುನಾವಣಾ ಆಯುಕ್ತ ನವದೀಪ್ ರಿನ್ವಾ ಅವರು ಕರಡುಪಟ್ಟಿ ಪ್ರಕಟಿಸಿದ್ದಾರೆ. ಇದರಲ್ಲಿ ಶೇ.18.70 ಅಂದರೆ ಸುಮಾರು 2.89 ಕೋಟಿ ಮತದಾರರ ಹೆಸರನ್ನು ಸಾವು, ವಲಸೆ, ಬಹು ನೋಂದಣಿ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಯೋಗ ತಿಳಿಸಿದೆ.
ಸಿಂಗಾಪುರ ಸೇನೆಗೆ ಲಾಲು ಮೊಮ್ಮಗ ಆದಿತ್ಯ ಸೇರ್ಪಡೆ
ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಪುತ್ರ ಆದಿತ್ಯ ಆಚಾರ್ಯ ಅವರು ಸಿಂಗಾಪುರದಲ್ಲಿ ಎರಡು ವರ್ಷಗಳ ಕಡ್ಡಾಯ ಸೇನಾ ಸೇವೆಗೆ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ರೋಹಿಣಿ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ‘ ಇವತ್ತು ನನಗೆ ಹೆಮ್ಮೆಯಾಗಿದೆ, ಪದವಿಪೂರ್ವ ಶಿಕ್ಷಣ ಮುಗಿಸಿದ ನಂತರ ಹಿರಿಯ ಮಗ ಆದಿತ್ಯ ಕೇವಲ 18ನೇ ವಯಸ್ಸಿನಲ್ಲಿ 2 ವರ್ಷಗಳ ಮಿಲಿಟರಿ ತರಬೇತಿಗೆ ಹೋಗಿದ್ದಾನೆ’ ಎಂದಿದ್ದಾರೆ. ಸಿಂಗಾಪುರದ ಕಾನೂನಿನ ಪ್ರಕಾರ, ಅಲ್ಲಿನ ಪ್ರಜೆಗಳು 18 ವರ್ಷ ಪೂರೈಸಿದ ಬಳಿಕ 2 ವರ್ಷ ಕಡ್ಡಾಯ ಮಿಲಿಟರಿ ಸೇವೆ ಸಲ್ಲಿಸಬೇಕು.
ಗುಜರಾತ್ ಹೈಕೋರ್ಟ್, ಯುಪಿ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಅಹಮದಾಬಾದ್/ ಮೌ: ಗುಜರಾತ್‌ನಲ್ಲಿ ಹೈಕೋರ್ಟ್ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳು ಹಾಗೂ ಉತ್ತರ ಪ್ರದೇಶದ ರೈಲು ನಿಲ್ದಾಣವೊಂದಕ್ಕೆ ಕಿಡಿಗೇಡಿಗಳು ಮಂಗಳವಾರ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಗುಜರಾತಿನಲ್ಲಿ ಹೈಕೋರ್ಟ್, 4 ಜಿಲ್ಲಾ ನ್ಯಾಯಾಲಯ ಹಾಗೂ 2 ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ದುಷ್ಕರ್ಮಿಗಳು ಇಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ನಿಷ್ಕ್ರೀಯದಳದವರು ತಪಾಸಣೆ ನಡೆಸಿದಾಗ ಇದೊಂದು ಹುಸಿ ಕರೆ ಎನ್ನುವುದು ಗೊತ್ತಾಗಿದೆ. ಮತ್ತೊಂದೆಡೆ ಉತ್ತರಪ್ರದೇಶದ ಮೌ ರೈಲು ನಿಲ್ದಾಣದಲ್ಲಿ ಕಾಶಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತರು ಸಂದೇಶ ಕಳುಹಿಸಿದ್ದರು. ಇದರಿಂದ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು. ತಪಾಸಣೆ ಬಳಿಕ ಇದು ಕೂಡ ಹುಸಿ ಕರೆ ಎನ್ನುವುದು ಪತ್ತೆಯಾಗಿದೆ.
