ಸಾರಾಂಶ
ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ
ನವದೆಹಲಿ: ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ), ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಬೋಧಿಸುವಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಸೂಚಿಸಿದೆ. ಈ ಕುರಿತು ಅದು ದೇಶವ್ಯಾಪಿ ಇರುವ 30000 ಶಾಲೆಗಳಿಗೆ ಮಾಹಿತಿ ರವಾನಿಸಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನೂ ನಡೆಸಿದೆ.
ಇದರ ಪ್ರಕಾರ, ಪೂರ್ವ ಪ್ರಾಥಮಿಕದಿಂದ (ಪ್ರೀಕೆಜೆ, ಎಲ್‌ಕೆಜಿ, ಯುಕೆಜಿ) 2ನೇ ತರಗತಿಯವರೆಗೆ ತಾಯ್ಭಾಷೆಯಲ್ಲಿ ಮಕ್ಕಳಿಗೆ ಬೋಧಿಸಲಾಗುವುದು. ಈ ನಿರ್ಧಾರದಿಂದ ಮಾತೃಭಾಷೆ ಬಳಕೆಗೆ ಉತ್ತೇಜನ ಸಿಗುವುದಲ್ಲದೆ, ಮಕ್ಕಳಿಗೆ ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲೂ ಸಹಕಾರಿಯಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಪ್ರಕಾರ, ನರ್ಸರಿಯಿಂದ 2ನೇ ತರಗತಿಯ ತನಕ ಮಾತೃಭಾಷೆ ಅಥವಾ ಆ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಯಲ್ಲಿ ಬೋಧಿಸಬೇಕು. ಇಲ್ಲವೇ, ರಾಜ್ಯದ ಅಧಿಕೃತ ಭಾಷೆಯಲ್ಲಿ ಪಾಠ ಮಾಡಬೇಕು. 2ನೇ ತರಗತಿ ಬಳಿಕ ಮಕ್ಕಳು ಮಾತೃಭಾಷೆಯಲ್ಲಿ ಅಥವಾ ಇತರೆ ಭಾಷೆಗಳಲ್ಲಿ ಬೋಧನೆಗೆ ಒಳಪಡಬಹುದು. 5ನೇ ತರಗತಿ ಬಳಿಕ ಒಂದು ಭಾಷೆಯನ್ನು ಹೆಚ್ಚುವರಿಯಾಗಿ ಕಲಿಯುವ ಆಯ್ಕೆಯೂ ಇರಲಿದೆ. ಇದನ್ನು ಎಂದಿನಿಂದ ಜಾರಿ ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಶಾಲೆಗಳಿಗೆ ನೀಡಲಾಗಿದೆ. ನಿರ್ಧಾರ ತಿಳಿಸಲು ಮೇ ತಿಂಗಳ ಕೊನೆಯ ತನಕ ಸಮಯಾವಕಾಶ ನೀಡಲಾಗಿದೆ.
ಈಗಾಗಲೇ 1 ಮತ್ತು 2ನೇ ತರಗತಿಯ ವರೆಗಿನ 22 ಭಾಷೆಗಳ ಪಠ್ಯಪುಸ್ತಕಗಳು ಸಿದ್ಧವಾಗಿವೆ
ಸಿಬಿಎಸ್‌ಇ ಸೂಚನೆ
-1 ಮತ್ತು 2ನೇ ತರಗತಿಯವರೆಗಿನ 22 ಭಾಷೆಗಳ ಪಠ್ಯಪುಸ್ತಕಗಳು ಸಿದ್ಧ
- 2ನೇ ತರಗತಿ ಬಳಿಕ ಮಾತೃಭಾಷೆ ಇಲ್ಲವೇ ಇತರೆ ಭಾಷೆಯ ಅವಕಾಶ
- ಮಾತೃಭಾಷೆ ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರದಿಂದ ಈ ಕ್ರಮ
- ಎಂದಿನಿಂದ ಜಾರಿ ಮಾಡಬೇಕು ಎಂಬ ಆಧಿಕಾರ ಶಾಲೆಗಳಿ ವಿವೇಚನೆಗೆ
- ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೇಂದ್ರೀಯ ಶಿಕ್ಷಣ ಮಂಡಳಿ ವಿಶಿಷ್ಟ ನಡೆ