ಮಾರ್ಚ್‌ 31ರವರೆಗೂ ಈರುಳ್ಳಿ ರಪ್ತು ನಿಷೇಧ ಮುಂದುವರೆಯಲಿದ್ದು, ವ್ಯಾಪಾರಸ್ಥರು ವದಮತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನವದೆಹಲಿ: ಬೆಲೆ ಏರಿಕೆ ನಿಯಂತ್ರಣ ಮತ್ತು ಸ್ಥಳೀಯವಾಗಿ ಈರುಳ್ಳಿ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧವನ್ನು ಮಾ.31ರವರೆಗೂ ಮುಂದುವರೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. 

ಈ ಕುರಿತು ಮಾಹಿತಿ ನೀಡಿದ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌, ‘ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಹಿಂಪಡೆಯಲಾಗಿದೆ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. 

ರಫ್ತು ನಿಷೇಧ ಜಾರಿಯಲ್ಲಿದೆ ಮತ್ತು ಆದೇಶದಲ್ಲಿ ಯಾವುದೇ ಮಾರ್ಪಾಡುಗಳಾಗಿಲ್ಲ’ ಎಂದು ತಿಳಿಸಿದ್ದಾರೆ. 

ಈರುಳ್ಳಿ ರಫ್ತು ನಿಷೇಧವನ್ನು ಸರ್ಕಾರ ಹಿಂಪಡೆದಿದೆ ಎಂಬ ವದಂತಿ ಹಬ್ಬಿದ ನಂತರ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಎರಡೇ ದಿನದಲ್ಲಿ ಶೇ.40.62ರಷ್ಟು ಏರಿಕೆಯಾಗಿ ಕ್ವಿಂಟಾಲ್‌ಗೆ 1800 ರು. ತಲುಪಿದೆ. 

ಈರುಳ್ಳಿ ರಫ್ತು ನಿಷೇಧವು ಮಾ.31ರ ಬಳಿಕವೂ ವಿಸ್ತರಣೆಯಾಗುವ ಸಂಭವವಿದ್ದು, ಸರ್ಕಾರವು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುವವರೆಗೂ ಆದೇಶವನ್ನು ಹಿಂಪಡೆಯದಿರಲು ದೃಢ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.