ಬಹು-ಔಷಧ-ನಿರೋಧಕ ಕ್ಷಯ ರೋಗ ನಿರ್ಮೂಲನೆಗೆ ಹೊಸ ಹೆಜ್ಜೆ: 6 ತಿಂಗಳಲ್ಲಿ MDR-TB ವಾಸಿ!

| Published : Sep 07 2024, 01:39 AM IST / Updated: Sep 07 2024, 04:28 AM IST

ಸಾರಾಂಶ

ಭಾರತದಲ್ಲಿ ಬಹು-ಔಷಧ-ನಿರೋಧಕ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಲು ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ಅಲ್ಪಾವಧಿಯ ಚಿಕಿತ್ಸಾ ವಿಧಾನ 'ಬಿಪಾಲ್ಮ್' ಅನ್ನು ಅನುಮೋದಿಸಿದೆ. ಈ ಹೊಸ ಚಿಕಿತ್ಸೆಯು ಕೇವಲ ಆರು ತಿಂಗಳಲ್ಲಿ ರೋಗವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ನವದೆಹಲಿ: ಹಲವು ಬಗೆಯ ಔಷಧಗಳಿಗೂ ವಾಸಿಯಾಗದೆ ನಿರೋಧಕ ಗುಣ ಹೊಂದಿರುವ ‘ಬಹು-ಔಷಧ-ನಿರೋಧಕ ಕ್ಷಯ ರೋಗ’ದ (ಎಂಡಿಆರ್‌-ಟಿಬಿ) ಚಿಕಿತ್ಸೆಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಬಗೆಯ, ಅಲ್ಪಾವಧಿಯ ಹಾಗೂ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವೊಂದಕ್ಕೆ ಅನುಮತಿ ನೀಡಿದೆ.

ಹೊಸ ಚಿಕಿತ್ಸೆಯಿಂದಾಗಿ ಎಂಡಿಆರ್‌-ಟಿಬಿಯಿಂದ ಬಳಲುತ್ತಿರುವ ದೇಶದ 75 ಸಾವಿರ ರೋಗಿಗಳಿಗೆ ಅನುಕೂಲವಾಗಲಿದೆ. ಅಲ್ಪಾವಧಿಗೆ ರೋಗ ವಾಸಿಯಾಗುವ ಕಾರಣ ಅವರಿಗೆ ಚಿಕಿತ್ಸಾ ವೆಚ್ಚವೂ ಉಳಿಯಲಿದೆ.

ವಿಶ್ವಾದ್ಯಂತ 2030ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡಲು ವಿಶ್ವಸಂಸ್ಥೆ ಗುರಿ ಹಾಕಿಕೊಂಡಿದೆ. ಆದರೆ ಅದಕ್ಕೆ ಐದು ವರ್ಷ ಮೊದಲೇ ಅಂದರೆ 2025ರೊಳಗೆ ದೇಶದಿಂದ ಕ್ಷಯ ನಿರ್ಮೂಲನೆ ಮಾಡುವ ಉದ್ದೇಶ ಹೊಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಬಿಪಾಲ್ಮ್‌’ (BPaLM) ಎಂಬ ಚಿಕಿತ್ಸಾ ವಿಧಾನಕ್ಕೆ ಅನುಮತಿ ನೀಡಿದೆ. ರಾಜ್ಯಗಳ ಜತೆ ಸಂವಹನ ನಡೆಸಿ ಇದನ್ನು ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿದೆ.

ಬೆಡಾಖ್ವಿಲಿನ್‌, ಪ್ರೆಟೊಮ್ಯಾನಿಡ್‌, ಲಿನೆಜೋಯ್ಡ್‌ ಹಾಗೂ ಮೊಕ್ಸಿಫ್ಲೋಕ್ಷಾಸಿನ್‌ ಸಮ್ಮಿಶ್ರಣದ ಚಿಕಿತ್ಸೆ ಬಿಪಾಲ್ಮ್‌ ಆಗಿದೆ. ಹಿಂದೆ ಎಂಡಿಆರ್‌-ಟಿಬಿ ಚಿಕಿತ್ಸೆಗೆ ಬಳಸುತ್ತಿದ್ದ ವಿಧಾನಕ್ಕಿಂತ ಅಲ್ಪಾವಧಿಯಲ್ಲಿ ರೋಗವನ್ನು ವಾಸಿ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.

ಏನೀ ಚಿಕಿತ್ಸೆಯ ಅನುಕೂಲ?:

ಸಾಂಪ್ರದಾಯಿಕ ವಿಧಾನದಲ್ಲಿ ಎಂಡಿಆರ್‌-ಟಿಬಿ ಚಿಕಿತ್ಸೆಗೆ 20 ತಿಂಗಳು ಬೇಕಾಗುತ್ತದೆ. ಜತೆಗೆ ಅಡ್ಡ ಪರಿಣಾಮವನ್ನೂ ರೋಗಿಗಳು ಎದುರಿಸಬೇಕಾಗುತ್ತದೆ. ಬಿಪಾಲ್ಮ್‌ ಚಿಕಿತ್ಸಾ ವಿಧಾನದಲ್ಲಿ ಆರೇ ತಿಂಗಳಲ್ಲೇ ರೋಗ ವಾಸಿಯಾಗುವ ಹೆಚ್ಚು ಸಾಧ್ಯತೆ ಇದೆ.