ಕೇಂದ್ರ ಸರ್ಕಾರಿ ನೌಕರರೇ, ಎಚ್ಚರ - ಹೊಸ ರೂಲ್ಸ್

| Published : Jun 23 2024, 02:02 AM IST / Updated: Jun 23 2024, 05:03 AM IST

ಸಾರಾಂಶ

ಕಚೇರಿಗೆ ತಡವಾಗಿ ಹೋಗುವ ಕೇಂದ್ರ ಸರ್ಕಾರಿ ನೌಕರರೇ, ಎಚ್ಚರ. ಇನ್ನುಮುಂದೆ ಬೆಳಿಗ್ಗೆ 9.15ರ ನಂತರ ನೀವು ಕಚೇರಿಗೆ ತೆರಳಿದರೆ ಅರ್ಧ ದಿನದ ರಜೆ ಕಡಿತವಾಗಲಿದೆ!

ನವದೆಹಲಿ: ಕಚೇರಿಗೆ ತಡವಾಗಿ ಹೋಗುವ ಕೇಂದ್ರ ಸರ್ಕಾರಿ ನೌಕರರೇ, ಎಚ್ಚರ. ಇನ್ನುಮುಂದೆ ಬೆಳಿಗ್ಗೆ 9.15ರ ನಂತರ ನೀವು ಕಚೇರಿಗೆ ತೆರಳಿದರೆ ಅರ್ಧ ದಿನದ ರಜೆ ಕಡಿತವಾಗಲಿದೆ!

ಆಫೀಸಿಗೆ ತಡವಾಗಿ ಬರುವ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಚಾಟಿ ಬೀಸಿದ್ದು, ಬೆಳಿಗ್ಗೆ 9.15ರ ನಂತರ ಬರುವ ನೌಕರರ ಅರ್ಧ ದಿನದ ರಜೆ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸುತ್ತವೆ. ಕೆಲ ನೌಕರರು ತಡವಾಗಿ ಕಚೇರಿಗೆ ಬಂದು, ಬೇಗ ಮನೆಗೆ ಹೋಗುವುದು ಕಂಡುಬರುತ್ತಿದೆ. ಇದರಿಂದ ವಿವಿಧ ಕೆಲಸಗಳಿಗಾಗಿ ಬರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರವು ನೌಕರರಿಗೆ ಕಟ್ಟುನಿಟ್ಟಾದ ಸೂಚನೆ ರವಾನಿಸಿದ್ದು, ‘ಬೆಳಿಗ್ಗೆ ಅನಿವಾರ್ಯವಾಗಿ ತಡವಾದರೆ 15 ನಿಮಿಷಕ್ಕೆ ಮಾತ್ರ ಮಾಫಿ ನೀಡಲಾಗುತ್ತದೆ. 15 ನಿಮಿಷಕ್ಕಿಂತ ತಡವಾದರೆ ಅವರ ಕ್ಯಾಷುವಲ್‌ ಲೀವ್‌ (ಸಿಎಲ್‌)ನಲ್ಲಿ ಅರ್ಧ ದಿನದ ರಜೆಯನ್ನು ಕಡಿತ ಮಾಡಲಾಗುತ್ತದೆ’ ಎಂದು ತಿಳಿಸಿದೆ.

ಅಲ್ಲದೆ, ಕೋವಿಡ್‌ ಬಳಿಕ ಇನ್ನೂ ಸಾಕಷ್ಟು ನೌಕರರು ಬಯೋಮೆಟ್ರಿಕ್‌ನಲ್ಲಿ ಹಾಜರಾತಿಯನ್ನೇ ದಾಖಲಿಸುತ್ತಿಲ್ಲ. ಅವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಬಯೋಮೆಟ್ರಿಕ್‌ನಲ್ಲಿ ಎಲ್ಲಾ ಹಂತದ ನೌಕರರು ಹಾಗೂ ಅಧಿಕಾರಿಗಳು ಹಾಜರಿ ದಾಖಲಿಸುವುದನ್ನು ಕಡ್ಡಾಯಗೊಳಿಸಿದೆ.

ಇನ್ನು, ಬೇಕಾಬಿಟ್ಟಿಯಾಗಿ ರಜೆ ಹಾಕುವ ನೌಕರರಿಗೂ ಸರ್ಕಾರ ಬಿಸಿ ಮುಟ್ಟಿಸಿದೆ. ರಜೆ ಬೇಕಾದರೆ ಸಂಬಂಧಪಟ್ಟವರಿಗೆ ಮೊದಲೇ ತಿಳಿಸಿ ಅನುಮತಿ ಪಡೆದುಕೊಂಡಿರಬೇಕು. ಇದ್ದಕ್ಕಿದ್ದಂತೆ ರಜೆ ಹಾಕಿ ನಂತರ ರಜೆಗೆ ಅಪ್ಲೈ ಮಾಡುವಂತಿಲ್ಲ ಎಂದೂ ಸೂಚಿಸಲಾಗಿದೆ.