ಸಾರಾಂಶ
ಭಾರತದಾದ್ಯಂತ ಭಾರೀ ವಿವಾದಕ್ಕೆ ಕಾರಣವಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಟೆಲಿಗ್ರಾಂ ಚಾನೆಲ್ಗಳನ್ನು ಟೆಲಿಗ್ರಾಂ ಆ್ಯಪ್ ಬ್ಲಾಕ್ ಮಾಡಿದೆ.
ನವದೆಹಲಿ: ಭಾರತದಾದ್ಯಂತ ಭಾರೀ ವಿವಾದಕ್ಕೆ ಕಾರಣವಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಟೆಲಿಗ್ರಾಂ ಚಾನೆಲ್ಗಳನ್ನು ಟೆಲಿಗ್ರಾಂ ಆ್ಯಪ್ ಬ್ಲಾಕ್ ಮಾಡಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾದ ಮಾಧ್ಯಮ ಟೆಲಿಗ್ರಾಂ ಎಂಬ ಆರೋಪದ ಹಿನ್ನೆಲೆಯಲ್ಲಿ ಕಂಪನಿ ಕ್ರಮ ಜರುಗಿಸಿದೆ.
ಶನಿವಾರ ಹೇಳಿಕೆ ನೀಡಿರುವ ಟೆಲಿಗ್ರಾಂ, ನೀಟ್ ಪ್ರಶ್ನೆ ಪತ್ರಿಕೆ ಸಂಬಂಧಿಸಿದ ಅನಧಿಕೃತ ವಿಷಯಗಳನ್ನು ಹಂಚಿಕೊಳ್ಳುತ್ತಿರುವ ಚಾನೆಲ್‌ಗಳನ್ನು ಬ್ಲಾಕ್ ಮಾಡಿದ್ದೇವೆ. ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾವು ಸರ್ಕಾರದ ತನಿಖೆಗೆ ಪೂರ್ತಿ ಬೆಂಬಲ ನೀಡಲಿದ್ದೇವೆ ಎಂದು ಟೆಲಿಗ್ರಾಂ ತಿಳಿಸಿದೆ.
ಸಿಬಿಐನಿಂದ ಓರ್ವನ ವಿಚಾರಣೆ: ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಂತೆ ಶನಿವಾರ ಉತ್ತರ ಪ್ರದೇಶ ಮೂಲಕದ ಒಬ್ಬನನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಟೆಲಿಗ್ರಾಂನಲ್ಲಿ ಪತ್ರಿಕೆಯ ಒಂದು ಭಾಗವನ್ನು ಪೋಸ್ಟ್ ಮಾಡಿದ ಆರೋಪದಡಿ ಒಬ್ಬನನ್ನು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ತಂಡವು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಆರೋಪಿಯು ರಾಜಸ್ಥಾನದ ಕೋಟಾದಲ್ಲಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.