ಭಾರೀ ವಿವಾದ ಸೃಷ್ಟಿಸಿದ್ದ ನೀಟ್‌ ಮರು ಪರೀಕ್ಷೆ ಇಂದು

| Published : Jun 23 2024, 02:02 AM IST / Updated: Jun 23 2024, 05:02 AM IST

ಸಾರಾಂಶ

ದೇಶದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಕೃಪಾಂಕ ಪಡೆದಿದ್ದ 1,563 ವಿದ್ಯಾರ್ಥಿಗಳಿಗೆ ಜೂ.23ರ ಭಾನುವಾರ ಮರು ಪರೀಕ್ಷೆ ನಡೆಯಲಿದೆ.

ನವದೆಹಲಿ: ದೇಶದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷೆಯಲ್ಲಿ ಕೃಪಾಂಕ ಪಡೆದಿದ್ದ 1,563 ವಿದ್ಯಾರ್ಥಿಗಳಿಗೆ ಜೂ.23ರ ಭಾನುವಾರ ಮರು ಪರೀಕ್ಷೆ ನಡೆಯಲಿದೆ.

ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ರೀತಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದು ಟಾಪರ್ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಪೈಕಿ 6 ಜನರು ಕೃಪಾಂಕ ಪಡೆದು ಟಾಪರ್‌ ಆಗಿದ್ದರು. ಅವರು ಸಹ ಮರು ಪರೀಕ್ಷೆ ಬರೆಯುತ್ತಿದ್ದಾರೆ.

ಈ ಪರೀಕ್ಷೆ 7 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಅವುಗಳಲ್ಲಿ 6 ಹೊಸ ಪರೀಕ್ಷಾ ಕೇಂದ್ರಗಳಾಗಿವೆ. ಪರೀಕ್ಷೆ ಸುಗಮವಾಗಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಪರೀಕ್ಷಾ ಕೇಂದ್ರದಲ್ಲಿ ಉಪಸ್ಥಿತರಿರಲಿದ್ದಾರೆ.

1563 ವಿದ್ಯಾರ್ಥಿಗಳಿಗೂ ಪರೀಕ್ಷೆ ಕಡ್ಡಾಯವಲ್ಲ. ಯಾರೆಲ್ಲಾ ಅಭ್ಯರ್ಥಿಗಳು ಮರು ಪರೀಕ್ಷೆಯನ್ನು ಬರೆಯುತ್ತಿದ್ದಾರೆಯೋ ಅವರಿಗೆ ಹಿಂದಿನ ಪರೀಕ್ಷೆಯ ಯಾವುದೇ ಅಂಕಗಳನ್ನು ಪರಿಗಣಿಸುವುದಿಲ್ಲ. ಹಾಗೆಯೇ ಮರು ಪರೀಕ್ಷೆ ಬರೆಯಲು ಬಯಸದ ಅಭ್ಯರ್ಥಿಗಳಿಗೆ ಹಿಂದಿನ ಪರೀಕ್ಷೆಯಲ್ಲಿ ಕೃಪಾಂಕ ಹೊರತು ಪಡಿಸಿ ಬಂದ ಉಳಿದ ಅಂಕ ಮಾತ್ರ ಪರಿಗಣಿಸಲಾಗುತ್ತದೆ

ಮೇಘಾಲಯ, ಹರ್ಯಾಣ, ಛತ್ತೀಸಗಢ, ಗುಜರಾತ್‌ ಮತ್ತು ಚಂಡೀಗಢದ 6 ಕೇಂದ್ರಗಳಲ್ಲಿ ಪರೀಕ್ಷೆಯ ಆರಂಭ ತಡವಾಗಿತ್ತು. ಹೀಗಾಗಿ ವಿಳಂಬ ಸರಿದೂಗಿಸಲು ಕೃಪಾಂಕ ನೀಡಲಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿತ್ತು. ಆದರೆ ಕೃಪಾಂಕ ನೀಡಿಕೆ ಹಿಂದೆ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.