ಮಣಿಪುರದಲ್ಲಿ ಶಾಂತಿಗೆ ಸರ್ವ ಯತ್ನ: ಅಮಿತ್ ಶಾ

| Published : Apr 16 2024, 01:06 AM IST / Updated: Apr 16 2024, 06:00 AM IST

ಸಾರಾಂಶ

ಗಲಭೆಪೀಡಿತ ಮಣಿಪುರ ರಾಜ್ಯವನ್ನು ಒಡೆಯದೆ ಅಲ್ಲಿ ಸರ್ವ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವುದು ಬಿಜೆಪಿಯ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದರು.

ಇಂಫಾಲ್‌: ಗಲಭೆಪೀಡಿತ ಮಣಿಪುರ ರಾಜ್ಯವನ್ನು ಒಡೆಯದೆ ಅಲ್ಲಿ ಸರ್ವ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವುದು ಬಿಜೆಪಿಯ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದರು.

ಸೋಮವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಲೋಕಸಭಾ ಚುನಾವಣೆ ಮಣಿಪುರವನ್ನು ಒಡೆಯುವ ಮತ್ತು ಒಂದುಗೂಡಿಸುವವರ ನಡುವಿನ ಸಂಗ್ರಾಮವಾಗಿದೆ. ಬಿಜೆಪಿಯು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವುದಕ್ಕೆ ಆದ್ಯತೆ ನೀಡುತ್ತದೆ’ ಎಂದು ತಿಳಿಸಿದರು.

ಕಳೆದ ವರ್ಷ ಮಣಿಪುರದಲ್ಲಿ ಪ್ರಬಲ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ವಿಚಾರವಾಗಿ ಗಲಭೆ ಏರ್ಪಟ್ಟು 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮಣಿಪುರದ ಒಂದು ಲೋಕಸಭಾ ಕ್ಷೇತ್ರಕ್ಕೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.