ಸಾರಾಂಶ
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಕನ್ನಡಪ್ರಭ ವಾರ್ತೆ ತುಮಕೂರುಆಡಂಬರದ ವಿವಾಹಗಳ ಸುಳಿಗೆ ಸಿಲುಕಿ ಮದುವೆಯ ಸಾಂಸ್ಕೃತಿಕ ಸ್ವರೂಪಗಳೇ ಬದಲಾಗುತ್ತಿವೆ. ಸರಳ ವಿವಾಹಗಳು ಮೂಲೆಗುಂಪಾಗುತ್ತಿವೆ ಎಂದು ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷರಾದ ಎಂ.ಸಿ.ಲಲಿತಾ ಆತಂಕ ವ್ಯಕ್ತಪಡಿಸಿದರು.ಇಲ್ಲಿನ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರವು ಆಯೋಜಿಸಿದ್ದ ಬದಲಾದ ಕಾಲಘಟ್ಟದಲ್ಲಿ ವರದಕ್ಷಿಣೆ ಪರಿಕಲ್ಪನೆ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಈಗ ವರದಕ್ಷಿಣೆ ಎಂಬ ಹೆಸರು ಕಡಿಮೆಯಾಗಿರಬಹುದು. ಆದರೆ ಮದುವೆ ಖರ್ಚು ಎಷ್ಟಾಗುತ್ತಿದೆ. ಇದಕ್ಕಾಗಿ ಹೆಣ್ಣು ಹೆತ್ತವರು ಮಾಡುತ್ತಿರುವ ಸಾಲ ಎಷ್ಟು ಎಂಬುದನ್ನು ನಾವಿಂದು ಗಂಭೀರವಾಗಿ ಅವಲೋಕಿಸಬೇಕಿದೆ. ಶಾಸ್ತ್ರಗಳೇ ಇಲ್ಲದ ವಿವಾಹಗಳು ಆಧುನಿಕತೆಯ ಭರಾಟೆಗೆ ಸಿಲುಕಿವೆ ಎಂದರು.ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ, ಬಹಳಷ್ಟು ಜನ ಮಾತನಾಡುವಾಗ ವರದಕ್ಷಿಣೆ ಸಮಸ್ಯೆ ಈಗ ಇಲ್ಲ ಎನ್ನುತ್ತಾರೆ. ಆದರೆ ವಿವಾಹದ ಖರ್ಚು ಲಕ್ಷ ಲಕ್ಷಗಳನ್ನು ದಾಟಿ ಹೋಗಿರುತ್ತದೆ. ಇದಕ್ಕಾಗಿ ಸಾಲ ಮಾಡುತ್ತಿದ್ದಾರೆ. ತೀರಿಸಲಾಗದೇ ಹೆಣಗಾಡುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ವರದಕ್ಷಿಣೆಯ ಸ್ವರೂಪ ಬದಲಾಗಿದೆಯೇ ಹೊರತು ವರದಕ್ಷಿಣೆ ಈ ನಮ್ಮ ಸಮಾಜದಿಂದ ದೂರ ಹೋಗಿಲ್ಲ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ 1992ರಿಂದ ಕಾನೂನು ವಿದ್ಯಾರ್ಥಿಗಳಿಂದ ಅಸ್ಥಿತ್ವಕ್ಕೆ ಬಂದ ಈ ಸಾಮಾಜಿಕ ಚಿಂತನೆಯ ವೇದಿಕೆ ವರದಕ್ಷಿಣೆ ವಿರೋಧಿ ಮನೋಭಾವವನ್ನು ವಿದ್ಯಾರ್ಥಿ ಹಂತದಲ್ಲಿಯೇ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಅರಿವು ಸಪ್ತಾಹ ಅಚರಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಸಾಂತ್ವನ ಕೇಂದ್ರದ ಮೂಲಕ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಿದೆ ಎಂದರು.ಪ್ರತಿ ತಿಂಗಳು ಈ ವೇದಿಕೆಗೆ 10 ರಿಂದ 15 ಕೌಟುಂಬಿಕ ಸಮಸ್ಯೆ ಪ್ರಕರಣಗಳು ದಾಖಲಾಗಿ ಇಲ್ಲಿಯೇ ಸಾಕಷ್ಟು ಪ್ರಕರಣಗಳು ಸಮಾಲೋಚನೆಯ ಮೂಲಕ ಇತ್ಯರ್ಥಗೊಳ್ಳುತ್ತಿವೆ ಎಂದು ವಿವರಿಸಿದರು. ಪ್ರಬಂಧ ಸ್ಪರ್ಧೆ ತೀಪುಗಾರರಾದ ಲೇಖಕಿ ಸಿ.ಎಲ್. ಸುನಂದಮ್ಮ ಮಾತನಾಡಿ, ವರದಕ್ಷಿಣೆ ವ್ಯಾಖ್ಯಾನ ಹಾಗೂ ಬದಲಾದ ಪರಿಸ್ಥಿತಿಯಲ್ಲಿ ವಿವಿಧ ಲೇಖಕರ ಅಭಿಪ್ರಾಯ ಬರಹಗಳನ್ನು ಅವಲೋಕಿಸಿ ಮಾತನಾಡಿದರು.ಸ್ಪರ್ಧಾ ವಿಜೇತರ ಪರವಾಗಿ ಪ್ರಥಮ ಬಹುಮಾನ ಪಡೆದ ಶಿರಾ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೈ. ನರೇಶ್ ಬಾಬು, ದ್ವಿತೀಯ ಬಹುಮಾನ ಪಡೆದ ಕನ್ನಡ ಸಹ ಶಿಕ್ಷಕ ಟಿ. ನರೇಂದ್ರಬಾಬು, ತೃತೀಯ ಬಹುಮಾನ ಪಡೆದ ತೋವಿನಕೆರೆ ಗಿರಿಜಮ್ಮ ಮಾತನಾಡಿದರು.ವೇದಿಕೆ ಪದಾಧಿಕಾರಿಗಳಾದ ರಾಜೇಶ್ವರಿ ಚಂದ್ರಶೇಖರ್, ಟಿ.ಆರ್. ಅನಸೂಯ, ಗೀತಾ ನಾಗೇಶ್, ಸಾಂತ್ವನ ಕೇಂದ್ರದ ಪಾರ್ವತಮ್ಮ, ಯುವರಾಣಿ, ನೇತ್ರಾವತಿ ಇತರರು ಉಪಸ್ಥಿತರಿದ್ದರು.