ಸಾರಾಂಶ
ಬೀಜಿಂಗ್: ಮಿತಿಮೀರಿದ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಹಾಗೂ ಕಟ್ಟಡ- ಮೂಲಸೌಕರ್ಯಗಳ ಅಧಿಕ ತೂಕದಿಂದಾಗಿ ಚೀನಾದ ಪ್ರಮುಖ ನಗರಗಳ ಪೈಕಿ ಅರ್ಧದಷ್ಟು ಶಹರಗಳು ನಿಧಾನವಾಗಿ ಕುಸಿಯಲು ಆರಂಭಿಸಿವೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ರಾಜಧಾನಿ ಬೀಜಿಂಗ್ ಹಾಗೂ ಟಿಯಾನ್‌ಜಿನ್ ಸೇರಿದಂತೆ ಚೀನಾದ ಪ್ರಮುಖ ನಗರಗಳು ಸಾಧಾರಣದಿಂದ ಗಂಭೀರ ಪ್ರಮಾಣದವರೆಗೆ ಕುಸಿತವನ್ನು ಅನುಭವಿಸುತ್ತಿವೆ. ಚೀನಾದ ಶೇ.45ರಷ್ಟು ನಗರ ಪ್ರದೇಶದ ಭೂಮಿ ವೇಗವಾಗಿ ಕುಸಿತ ಕಾಣುತ್ತಿದೆ ಎಂದು ‘ಸೈನ್ಸ್’ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.
20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಚೀನಾದ ಪ್ರತಿಯೊಂದು ನಗರದ ಕುಸಿತವನ್ನು 2015ರಿಂದ 2022ರವರೆಗೆ ಅಧ್ಯಯನ ನಡೆಸಲಾಗಿದೆ. 82 ನಗರಗಳಲ್ಲಿ ಈ ಪರಿಶೀಲನೆ ನಡೆದಿದ್ದು, ಪ್ರತಿ ಆರರಲ್ಲಿ ಒಂದು ನಗರ ಪ್ರತಿ ವರ್ಷ 10 ಮಿ.ಮೀ.ನಷ್ಟು ಕುಸಿತ ಅನುಭವಿಸುತ್ತಿದೆ.
ಚೀನಾದ ಅತಿದೊಡ್ಡ ನಗರವಾಗಿರುವ ಶಾಂಘೈನಲ್ಲೂ ಕುಸಿತ ಮುಂದುವರಿದಿದ್ದು, ಕಳೆದ ಶತಮಾನಕ್ಕೆ ಹೋಲಿಸಿದರೆ 3 ಮೀಟರ್‌ನಷ್ಟು ಕುಸಿತವನ್ನು ಕಂಡಿದೆ. ಬೀಜಿಂಗ್ ನಗರದ ಸಬ್‌ವೇ ಹಾಗೂ ಹೆದ್ದಾರಿಗಳ ಬಳಿ ವಾರ್ಷಿಕ 45 ಮಿ.ಮೀ.ನಷ್ಟು ಕುಸಿತ ಕಂಡುಬಂದಿದೆ ಎಂದು ವರದಿ ವಿವರಿಸಿದೆ.