3ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಶುವಿಹಾರದ ಪುಟ್ಟ ಬಾಲಕಿಯ ಮೇಲೆ ಕಲ್ಲು ಹಾಗೂ ಹೂವಿನ ಕುಂಡದಿಂದ ಭೀಕರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ನಡೆದಿದೆ.
ಪಂಚಕುಲ (ಹರ್ಯಾಣ): 3ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಶುವಿಹಾರದ ಪುಟ್ಟ ಬಾಲಕಿಯ ಮೇಲೆ ಕಲ್ಲು ಹಾಗೂ ಹೂವಿನ ಕುಂಡದಿಂದ ಭೀಕರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ.
ಆಗಿದ್ದೇನು?:
ಕಳೆದ ಬುಧವಾರ ಶಾಲೆ ಮುಗಿದ ಮೇಲೆ ಎಲ್ಲಾ ಮಕ್ಕಳು ಹೊರಗೆ ತೆರಳಿದ್ದಾರೆ. ಈ ವೇಳೆ ಆ ಕೊಠಡಿಗೆ ಆಗಮಿಸಿದ ಬಾಲಕ ಆಕೆಯ ತಂದೆಯನ್ನು ಭೇಟಿ ಮಾಡಿಸುವುದಾಗಿ ನಂಬಿಸಿ ಆಕೆಯನ್ನು ಶಾಲೆಯ ಮೊದಲನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿಗೆ ತಲುಪುತ್ತಿದ್ದಂತೆಯೇ ಬಾಲಕಿ ಮೇಲೆ ಏಕಾಏಕಿ ದಾಳಿ ನಡೆಸಲು ಪ್ರಾರಂಭಿಸಿದ್ದಾನೆ. ಮೊದಲು ಬಾಲಕಿಯ ತಲೆಯನ್ನು ಶಾಲೆ ಮರದ ಡೆಸ್ಕ್‌ಗೆ ಹಲವು ಬಾರಿ ಚಚ್ಚಿದ ಬಾಲಕ ಬಳಿಕ ಆಕೆಯನ್ನು ನೆಲಕ್ಕೆ ತಳ್ಳಿ ಅಲ್ಲಿ ಕಾಲಿನಿಂದ ಹಲವು ಬಾರಿ ಥಳಿಸಿದ್ದಾನೆ. ಅದಾದ ನಂತರ ಹೂವಿನ ಕುಂಡವನ್ನು ಎತ್ತಿ ಬಾಲಕಿಯ ತಲೆಗೆ ಬಲವಾಗಿ ಹಲವು ಬಾರಿ ಎಸೆದಿದ್ದಾನೆ. ಪುಟ್ಟ ಬಾಲಕನ ಈ ಕೃತ್ಯ ಶಾಲೆಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಆತನ ಮನಸ್ಥಿತಿ ಬಗ್ಗೆ ಭಾರೀ ಅಚ್ಚರಿ ಮತ್ತು ಆಕ್ರೋಶ ವ್ಯಕ್ತವಾಗಿದೆ.
ಸಂಜೆ ಎಷ್ಟು ಹೊತ್ತಾದರೂ ಮಗಳು ಮನೆಗೆ ಬರದೇ ಇದ್ದಾಗ ಪೋಷಕರು ಶಾಲೆಗೆ ಬಂದ ವೇಳೆ ರಕ್ತದ ಮಡುವಿನಲ್ಲಿ ಬಿದಿದ್ದ ಬಾಲಕಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ಸೆಕ್ಟರ್ 6ರಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯರ ಸಲಹೆಯಂತೆ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ರವಾನಿಸಲಾಗಿದೆ.
ಪೊಲೀಸ್ ತನಿಖೆ:
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದೆ. ಇಂತಹ ಘಟನೆಗೆ ಶಾಲೆಯ ಆಡಳಿತ ಮಂಡಳಿಯ ಭದ್ರತಾ ಲೋಪವೇ ಕಾರಣ ಎಂಬ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಶಾಲಾ ಆಡಳಿತ ಮಂಡಳಿ ಹಾಗೂ ಬಾಲಕನ ಪೋಷಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

