ಸಾರಾಂಶ
ಬೆಂಗಳೂರು : ‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಬೇಕಿರುವುದು ಯಾವ ಆರೆಸ್ಸೆಸ್ ನಾಯಕರು ಹೇಳಿದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದೇ ಹೊರತು, ಡಾ.ಬಿ.ಆರ್.ಅಂಬೇಡ್ಕರ್ ಅವರು ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಮೋದಿ ಅವರ ಹೇಳಿಕೆಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ನರೇಂದ್ರ ಮೋದಿಯವರೇ, ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅಥವಾ ಅವರ ಅನುಯಾಯಿಗಳಿಂದ ಅಲ್ಲ. ಅಪಾಯ ಎದುರಾಗಿರುವುದು ನಿಮ್ಮ ಮಾತೃಸಂಸ್ಥೆ ಆರೆಸ್ಸೆಸ್ ಮತ್ತು ಅದರ ನಾಯಕರಿಂದ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಇತಿಹಾಸವನ್ನು ಮರೆಯಬಾರದೆಂದು ನಮಗೆ ಪಾಠ ಮಾಡಿದವರು ಇದೇ ಅಂಬೇಡ್ಕರ್ ಅವರು’ ಎಂದು ಹೇಳಿದ್ದಾರೆ.
ಅಲ್ಲದೆ, ಸಂವಿಧಾನದ ಕುರಿತು ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹಿಂದಿನ ಸಂಪಾದಕೀಯದ ಸವಾಲುಗಳು, ಗೋಳ್ವಾಳ್ಕರ್, ಸಾವರ್ಕರ್ ಸೇರಿದಂತೆ ವಿವಿಧ ಆರೆಸ್ಸೆಸ್ ನಾಯಕರುಗಳು ಸಂವಿಧಾನ ಕುರಿತು ನೀಡಿದ್ದ ಹೇಳಿಕೆಗಳನ್ನು ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು ಅವುಗಳ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ.