ಸಾರಾಂಶ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳುವವರ ಸಂಖ್ಯೆ ಏರುತ್ತಿದ್ದು, ಇದರ ಪರಿಣಾಮವಾಗಿ ಮಧ್ಯಪ್ರದೇಶ, ಯುಪಿ ಗಡಿಯಲ್ಲಿ 300 ಕಿ.ಮೀ. ವಾಹನ ದಟ್ಟಣೆ ಉಂಟಾಗಿದೆ.
ಭೋಪಾಲ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳುವವರ ಸಂಖ್ಯೆ ಏರುತ್ತಿದ್ದು, ಇದರ ಪರಿಣಾಮವಾಗಿ ಮಧ್ಯಪ್ರದೇಶ, ಯುಪಿ ಗಡಿಯಲ್ಲಿ 300 ಕಿ.ಮೀ. ವಾಹನ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಪೊಲೀಸರು ರೇವಾ, ಕಟನಿ ಮತ್ತು ಜಬಲ್ಪುರದಲ್ಲಿ ವಾಹನಗಳನ್ನು ತಡೆದು ಹಿಡಿದಿದ್ದಾರೆ. ಜೊತೆಗೆ ಸಂಚಾರವನ್ನು 2 ದಿನ ಮುಂದೂಡುವಂತೆ ಮನವಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು 50 ಕಿ.ಮಿ. ದೂರ ಕ್ರಮಿಸಲು 10-12 ತಾಸು ತಲುಪುತ್ತಿದೆ ಎಂದು ಹೇಳಿದ್ದಾರೆ.
ಸದಾಕಾಲದ ನನ್ನ ಎನರ್ಜಿ ಗುಟ್ಟು ಕ್ರಿಯಾಯೋಗ : ರಜನಿ ರಹಸ್ಯ ಬಯಲು!
ಚೆನ್ನೈ: ಸದಾ ಚೈತನ್ಯದಿಂದ, ಧನಾತ್ಮಕತೆಯಿಂದಿರುವ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಎನರ್ಜಿಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕಳೆದ 2 ದಶಕದಿಂದ ನಡೆಸಿಕೊಂಡು ಬರುತ್ತಿರುವ ಕರ್ಮಯೋಗವೇ ತಮ್ಮ ಧನಾತ್ಮಕತೆಯ ರಹಸ್ಯ ಎಂದು ಹೇಳಿದ್ದಾರೆ. ರಾಂಚಿಯ ವೈಎಸ್‌ಎಸ್ ಆಶ್ರಮದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ರಜನಿ, ‘ನನ್ನನ್ನು ಭೇಟಿಯಾದವರು ಧನಾತ್ಮಕ ಶಕ್ತಿ ದೊರೆಯುತ್ತದೆ ಎನ್ನುತ್ತಾರೆ. ಅದರ ರಹಸ್ಯವೆಂದರೆ ನಾನು ಕ್ರಿಯಾಯೋಗವನ್ನು ಅಭ್ಯಾಸ ಮಾಡುತ್ತೇನೆ. ಕ್ರಿಯಾ ಅಭ್ಯಾಸವನ್ನು ಪ್ರಾರಂಭಿಸಿದಾಗಿನಿಂದ, ನನ್ನೊಳಗೆ ಬದಲಾವಣೆ ಸಂಭವಿಸಿತು. ಅದನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ. ಅದೊಂದು ರೀತಿಯ ಮೌನ’ ಎಂದಿದ್ದಾರೆ.
‘ಅಲಿಗಢ ಮುಸ್ಲಿಂ ವಿವಿ ಹಾಸ್ಟೆಲ್‌ನಲ್ಲಿ ಚಿಕನ್ ಬದಲು ಗೋಮಾಂಸ’
ಅಲಿಗಢ (ಉತ್ತರ ಪ್ರದೇಶ): ಇಲ್ಲಿನ ಮುಸ್ಲಿಂ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಚಿಕನ್ ಬದಲು ಬೀಫ್ (ಗೋಮಾಂಸ) ಬಿರಿಯಾನಿ ಕೊಡಲಾಗುವುದು ಎಂಬ ನೋಟಿಸ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಇನ್ನು ಮುಂದೆ ಚಿಕನ್ ಬಿರಿಯಾನಿ ಇರುವುದಿಲ್ಲ. ಅದರ ಬದಲು ಬೀಫ್ ಬಿರಿಯಾನಿ ಇರುತ್ತದೆ ಎಂದು ಮೆನುವಿನಲ್ಲಿ ಹಾಕಿದ್ದಾರೆ. ಈ ಮೆನು ಹೊಂದಿದ ನೋಟಿಸ್‌ಗೆ ಭಾರಿ ಆಕ್ರೋಶ ಹೊರಹೊಮ್ಮಿ, ವಿವಾದ ತಲೆಎತ್ತಿದ ಬೆನ್ನಲ್ಲೇ ವಿವಿ ಆಡಳಿತ ಇದೊಂದು ಪ್ರಮಾದವಾಗಿದೆ. ಮೆನುವಿಗೆ ಯಾವುದೇ ಅಧಿಕೃತ ಸಹಿ ಇಲ್ಲ. ಸಂಬಂಧಪಟ್ಟ ಹಿರಿಯ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಯಾವುದೇ ಗೋಮಾಂಸವನ್ನು ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಮತ್ತೊಂದೆಡೆ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದ ವಿರುದ್ಧ ಹೋರಾಟ : ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಒಡಿಶಾದಲ್ಲಿ ಕೇಸ್
ಝಾರ್ಸುಗುಡಾ (ಒಡಿಶಾ): ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ವೇಳೆ ‘ನಾವು ದೇಶದ ವಿರುದ್ಧ ಹೋರಾಡುತ್ತೇವೆ’ ಎಂದಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಒಡಿಶಾದಲ್ಲಿ ಎಫ್‌ಐಆರ್ ದಾಖಲಾಗಿದೆ. ಝಾರ್ಸುಗುಡಾದ ಸಿಟಿಜನ್ ಫೋರಂ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಬಜರಂಗದಳ ಕೇಸು ದಾಖಲಿಸಿದ್ದು, ಇಂತಹ ಹೇಳಿಕೆಗಳು ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ. ಜೊತೆಗೆ ಯಾವುದೇ ಪಕ್ಷ ಮತ್ತು ಸಂಘಟನೆ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು. ಇದು ಸ್ವಾತಂತ್ರ್ಯದ ದುರುಪಯೋಗ. ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.
ಮಹಾಕುಂಭ ಮೇಳಕ್ಕಿಂದು ರಾಷ್ಟ್ರಪತಿ: ಪುಣ್ಯಸ್ನಾನ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ. ಪ್ರಯಾಗರಾಜ್ ಭೇಟಿ ಸಮಯದಲ್ಲಿ, ರಾಷ್ಟ್ರಪತಿಗಳು ಸಂಗಮದಲ್ಲಿ ಪವಿತ್ರ ಸ್ನಾನ, ಪೂಜೆ ಮಾಡಲಿದ್ದಾರೆ. ಅಕ್ಷಯವಟ ಮತ್ತು ಹನುಮಾನ್ ಮಂದಿರಕ್ಕೆ ತೆರಳಿ ದರ್ಶನ ಪಡೆದು, ನಂತರ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಭಾನುವಾರ ಮಾಹಿತಿ ನೀಡಿದೆ. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ ಮಹಾಕುಂಭ ಮೇಳ ಜಗತ್ತಿನಾದ್ಯಂತ ಜನರನ್ನು ಆಕರ್ಷಿಸುತ್ತಿದ್ದು, ಫೆ.5ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಪವಿತ್ರ ಸ್ನಾನ ಮಾಡಿದ್ದರು.
ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಬಿಜೆಪಿ ಹಿಂದೂ ಅಭ್ಯರ್ಥಿ ಜಯ
ನವದೆಹಲಿ: ದೆಹಲಿ ಗದ್ದುಗೆ ಹಿಡಿದಿರುವ ಬಿಜೆಪಿ ಈ ಚುನಾವಣೆಯಲ್ಲಿ ಕೆಲ ಗಮನಾರ್ಹ ಸಾಧನೆ ಮಾಡಿದ್ದು, ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ, 2020ರಲ್ಲಿ ದೊಡ್ಡ ದಂಗೆಗೆ ಸಾಕ್ಷಿಯಾಗಿದ್ದ ಮುಸ್ತಫಾಬಾದ್ ಕ್ಷೇತ್ರದಲ್ಲಿ ಹಿಂದೂ ಅಭ್ಯರ್ಥಿ ಮೋಹನ್ ಸಿಂಗ್ ಬಿಷ್ತಾರನ್ನು ನಿಲ್ಲಿಸಿ 17 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದೆ.ದೆಹಲಿಯ ಮುಸ್ತಫಾಬಾದ್ ಮುಸ್ಲಿಂರ ಭದ್ರಕೋಟೆ. 2020ರಲ್ಲಿ ಇಲ್ಲಿ ಗಲಭೆ ನಡೆದು 53 ಜೀವಗಳು ಬಲಿಯಾಗಿದ್ದವು.
ಶೇ.39.5ರಷ್ಟು ಮುಸ್ಲಿಂ ಮತದಾರರೇ ಇರುವ ಈ ಕ್ಷೇತ್ರದಲ್ಲಿ ಆಪ್ ಮತ್ತು ಎಐಎಂಐಎಂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇಬ್ಬರ ಪೈಪೋಟಿ ನಡುವೆಯೂ ಬಿಜೆಪಿ ಹಿಂದೂ ಅಭ್ಯರ್ಥಿ ಮೋಹನ್ ಸಿಂಗ್ ಬಿಷ್ತಾ ಅವರು 17,578 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಮುಸ್ತಾಫಬಾದ್ ಕ್ಷೇತ್ರದ ಹೆಸರು ಶಿವಪುರಿ: ಬಿಜೆಪಿ ಶಾಸಕ ಪ್ರಸ್ತಾಪ
ನವದೆಹಲಿ: ಮುಸ್ಲಿಂ ಬಾಹುಳ್ಯವುಳ್ಳ ಮುಸ್ತಫಾಬಾದ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿದ ಬಿಜೆಪಿಯ ಮೋಹನ್ ಸಿಂಗ್, ಗೆಲುವಿನ ಬೆನ್ನಲ್ಲೇ ತಮ್ಮ ಕ್ಷೇತ್ರದ ಹೆಸರು ಬದಲಾವಣೆ ಪ್ರಸ್ತಾಪ ಮುಂದಿಟ್ಟಿದ್ದಾರೆ. ಕ್ಷೇತ್ರದ ಹೆಸರನ್ನು ಶಿವವಿಹಾರ ಅಥವಾ ಶಿವಪುರಿ ಎಂದು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಪ್ರಸ್ತಾಪಕ್ಕೆ ಮೋಹನ್ ಸಮರ್ಥನೆ ಕೂಡ ನೀಡಿದ್ದು, ಮುಸ್ತಾಫಬಾದ್ ಕ್ಷೇತ್ರದಲ್ಲಿ ಹಿಂದೂಗಳ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಹೆಸರು ಬದಲಾವಣೆಯಾಗಬೇಕು ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಒಂದು ಕಡೆ ಶೇ.58ರಷ್ಟು ಜನರಿದ್ದಾರೆ. ಮತ್ತೊಂದೆಡೆ ಶೇ.42ರಷ್ಟು ಜನರಿದ್ದಾರೆ. ಅದಕ್ಕೆ ತಕ್ಕಂತೆ ಹೆಸರು ಬದಲಾಯಿಸುವುದು ಶೇ.58ರಷ್ಟು ಜನರ ಹಕ್ಕು. ಹಾಗಾಗಿ ಹೆಸರು ಶಿವ ವಿಹಾರ ಅಥವಾ ಶಿವಪುರಿ ಬದಲಾವಣೆಯಾಗಬೇಕು’ ಎಂದಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))