1963ರ ನ.21ರಂದು ಅಮೆರಿಕದ ರಾಕೆಟ್‌ ಬಳಸಿ ಇಸ್ರೋ ಮೊದಲ ಉಡ್ಡಯನ : ಇಂದು 100ನೇ ಉಡ್ಡಯನ ಮುಕುಟ

| N/A | Published : Jan 29 2025, 01:31 AM IST / Updated: Jan 29 2025, 07:19 AM IST

1963ರ ನ.21ರಂದು ಅಮೆರಿಕದ ರಾಕೆಟ್‌ ಬಳಸಿ ಇಸ್ರೋ ಮೊದಲ ಉಡ್ಡಯನ : ಇಂದು 100ನೇ ಉಡ್ಡಯನ ಮುಕುಟ
Share this Article
  • FB
  • TW
  • Linkdin
  • Email

ಸಾರಾಂಶ

1963ರ ನ.21ರಂದು ಅಮೆರಿಕದ ರಾಕೆಟ್‌ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನ ನಡೆಸಲಿದೆ.

ಶ್ರೀಹರಿಕೋಟಾ: 1963ರ ನ.21ರಂದು ಅಮೆರಿಕದ ರಾಕೆಟ್‌ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನ ನಡೆಸಲಿದೆ. ಬುಧವಾರ ಬೆಳಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎನ್‌ವಿಎಸ್‌-02 ಉಪಗ್ರಹ ಹೊತ್ತು ಜಿಎಸ್‌ಎಲ್‌ವಿ ರಾಕೆಟ್‌ ಆಗಸಕ್ಕೆ ನೆಗೆಯಲಿದೆ.

ಸ್ವದೇಶಿ ಜಿಪಿಎಸ್‌ ಯೋಜನೆಯ ಭಾಗವಾಗಿ ಎನ್‌ವಿಎಸ್‌-02 ಉಪಗ್ರಹವನ್ನು ಇಸ್ರೋ ಉಡ್ಡಯನ ನಮಾಡುತ್ತಿದೆ. ಇಸ್ರೋ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ ಬಳಿಕ ವಿ.ನಾರಾಯಣನ್‌ ಅವರ ಪಾಲಿಗೆ ಇದು ಮೊದಲ ಮಹತ್ವದ ಯೋಜನೆಯಾಗಿದೆ.

ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಹೊಂದಿರುವ ಜಿಯೋಸಿಂಕ್ರೋನಸ್‌ ಉಪಗ್ರಹ ಉಡ್ಡಯನ ವಾಹನ(ಜಿಎಸ್‌ಎಲ್‌ವಿ)ನ 17ನೇ ಉಡ್ಡಯನ ಇದಾಗಿದೆ. ಈ ಬಾರಿ ಉಪಗ್ರಹವು ನ್ಯಾವಿಗೇಷನ್‌ ಸೆಟಲೈಟ್‌ ಎನ್‌ವಿಎಸ್‌-02(ಎರಡನೇ ತಲೆಮಾರಿನ ಎನ್‌ವಿಎಸ್‌ ಉಪಗ್ರಹ)ವನ್ನು ನಭಕ್ಕೆ ಹೊತ್ತೊಯ್ಯುತ್ತಿದೆ.

ಈ ಎನ್‌ವಿಎಸ್‌ ಸ್ಯಾಟಲೈಟ್‌ ಭಾರತದ ನ್ಯಾವಿಗೇಷನ್‌(ಸ್ವದೇಶಿ ಜಿಪಿಎಸ್‌) ಉಪಗ್ರಹಗಳ ಜಾಲದ ಎರಡನೇ ತಲೆಮಾರಿನ ಉಪಗ್ರಹವಾಗಿದೆ. ಇದು ಭಾರತೀಯ ಉಪಖಂಡ(ಜತೆಗೆ ಅದರಾಚೆಗಿನ 1500 ಕಿ.ಮೀ. ದೂರದವರೆಗೆ)ದ ಬಳಕೆದಾರರಿಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿ ಹೊಂದಿದೆ. ಈ ಉಪಗ್ರಹ ಉಡ್ಡಯನಕ್ಕೆ ಸಂಬಂಧಿಸಿದ ಕ್ಷಣಗಣನೆ ಮಂಗಳವಾರ ಮುಂಜಾನೆ 2.53ರಂದೇ ಆರಂಭವಾಗಿದೆ.

ಈ ಹಿಂದೆ ಜಿಎಸ್‌ಎಲ್‌ವಿ-ಎಫ್‌12 ರಾಕೆಟ್‌ ಎನ್‌ವಿಎಸ್‌-01 ಉಪಗ್ರಹವನ್ನು ಮೇ 29, 2023ರಂದು ಯಶಸ್ವಿಯಾಗಿ ಗಗನಕ್ಕೆ ಕೂರಿಸಿತ್ತು. ಇದೀಗ 50.9 ಮೀಟರ್‌ ಎತ್ತರದ ಜಿಎಸ್‌ಎಲ್‌ವಿ-ಎಫ್‌15 ರಾಕೆಟ್‌ ಎರಡನೇ ತಲೆಮಾರಿನ ಎನ್‌ವಿಎಸ್‌ ಉಪಗ್ರಹದೊಂದಿಗೆ ಗಗನಕ್ಕೆ ಜಿಗಿಯಲು ಸಿದ್ಧವಾಗಿದೆ.

ಭಾರತದ ನ್ಯಾವಿಗೇಷನ್‌ ಉಪಗ್ರಹಗಳ ಗುಚ್ಛವು ಎರಡನೇ ತಲೆಮಾರಿನ ಎನ್‌ವಿಎಸ್‌-01/02/03/04/05 ಎಂಬ ಐದು ಸ್ಯಾಟಲೈಟ್‌ಗಳನ್ನು ಹೊಂದಿದೆ. ಈಗಾಗಲೇ ಎನ್‌ವಿಎಸ್‌-01ನ್ನು ಯಶಸ್ವಿಯಾಗಿ ಕಕ್ಷೆಗೆ ಕೂರಿಸಲಾಗಿದ್ದು, ಈಗ ಬುಧವಾರ ಉಡ್ಡಯನಗೊಳ್ಳುತ್ತಿರುವ ಎನ್‌ವಿಎಸ್‌-02 ಉಪಗ್ರಹವು ಈಗಿರುವ ನಾವಿಕ್‌ನ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲಿದೆ.

ಈ ಎನ್‌ವಿಎಸ್‌-02 ಉಪಗ್ರಹವನ್ನು ಯು.ಆರ್‌.ಸ್ಯಾಟಲೈಟ್‌ ಸೆಂಟರ್‌ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು 2,250 ಕೆ.ಜಿ.ಭಾರವಿದ್ದು, ಎಲ್‌1, ಎಲ್‌5 ನ್ಯಾವಿಗೇಷನ್‌ ಪೇ ಲೋಡ್‌ ಮತ್ತು ಸಿ ಬ್ಯಾಂಡ್‌ ಜೊತೆಗೆ ಹೆಚ್ಚುವರಿಯಾಗಿ ಎಸ್‌ ಬ್ಯಾಂಡ್‌ಗಳನ್ನು ಹೊಂದಿದೆ.

ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ಕೃಷಿ, ನೌಕೆಗಳ ನಿರ್ವಹಣೆ, ಮೊಬೈಲ್‌ ಲೊಕೇಷನ್‌ ಆಧಾರಿತ ಸೇವೆಗಳು, ಸ್ಯಾಟಲೈಟ್‌ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್‌ ಆಫ್‌ ಥಿಂಗ್ಸ್‌((IoT)) ಆಧಾರಿತ ಅಪ್ಲಿಕೇಷನ್‌ಗಳು, ತುರ್ತು ಮತ್ತು ಸಮಯಾಧಾರಿತ ಸೇವೆಗಳಿಗೆ ನೆರವು ನೀಡಲಿದೆ.