ಸಾರಾಂಶ
ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಹೊತ್ತಿನಲ್ಲೇ, ದೇಶದ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸುವ ಉಪಗ್ರಹವೊಂದನ್ನು ಭಾನುವಾರ ಉಡ್ಡಯನ ಮಾಡಲು ಸಜ್ಜಾಗಿದೆ.
ಶ್ರೀಹರಿಕೋಟಾ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಹೊತ್ತಿನಲ್ಲೇ, ದೇಶದ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸುವ ಉಪಗ್ರಹವೊಂದನ್ನು ಭಾನುವಾರ ಉಡ್ಡಯನ ಮಾಡಲು ಸಜ್ಜಾಗಿದೆ. ಭಾನುವಾರ ಬೆಳಗ್ಗೆ 5.59ಕ್ಕೆ ಇಸ್ರೋದ ಇಒಎಸ್-09 (ಭೂಸರ್ವೇಕ್ಷಣಾ) ಉಪಗ್ರಹವನ್ನು ಪಿಎಸ್‌ಎಲ್‌ವಿ -ಸಿ 61 ರಾಕೆಟ್ ಹೊತ್ತು ಗಗನಕ್ಕೆ ನೆಗೆಯಲಿದೆ.
ಕೃಷಿ, ಅರಣ್ಯ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ, ನಗರ ಯೋಜನೆ, ರಾಷ್ಟ್ರೀಯ ಭದ್ರತೆ ಸೇರಿದಂತೆ ದೇಶದ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಿರುವ ಈ ಉಪಗ್ರಹ, ರಾತ್ರಿ ಹೊತ್ತಿನಲ್ಲೂ ಭೂಮಿಯ ಮೇಲಿನ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಬಲ್ಲದಾಗಿದೆ. ಉಡ್ಡಯನಗೊಂಡ 17 ನಿಮಿಷಗಳಲ್ಲಿ ಇಸ್ರೋದ ಈ 101ನೇ ಉಪಗ್ರಹ 500 ಕಿ.ಮೀ.ಗಿಂತ ಹೆಚ್ಚು ಎತ್ತರದ ಕಕ್ಷೆ ಸೇರಲಿದೆ.
ಉಪಗ್ರಹದ ವಿಶೇಷತೆ:
ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಈ ಉಪಗ್ರಹವು ವಿಶೇಷ ಪಾತ್ರ ವಹಿಸಲಿದ್ದು, ಭೂಮಿಯ ಮೇಲ್ಮೈನ ಹೆಚ್ಚಿನ ರೆಸಲ್ಯೂಶನ್ ಚಿತ್ರ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಈ ಉಪಗ್ರಹವು ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಡಾರ್ ಹೊಂದಿದ್ದು, ಎಲ್ಲಾ ಹವಾಮಾನದಲ್ಲೂ ಮತ್ತು ಕಡಿಮೆ ಬೆಳಕಿನಲ್ಲಿ ಭೂಪ್ರದೇಶದ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿದುಕೊಡುತ್ತದೆ. ದೇಶದ ಗಡಿಗಳಲ್ಲಿ ಶತ್ರುಗಳ ಚಲನವಲನ ಸೇರಿದಂತೆ ಭದ್ರತಾ ಪರಿಶೀಲನೆಗೆ ನೆರವಾಗಲಿದೆ.
‘ದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 10 ಉಪಗ್ರಹಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರವು ತನ್ನ 7,000 ಕಿ.ಮೀ. ಸಮುದ್ರ ತೀರ ಪ್ರದೇಶಗಳು ಮತ್ತು ಸಂಪೂರ್ಣ ಉತ್ತರ ಭಾಗವನ್ನು ಮೇಲ್ವಿಚಾರಣೆ ಮಾಡಬೇಕು. ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ, ದೇಶವು ಅದನ್ನು ಸಾಧಿಸಲು ಸಾಧ್ಯವಿಲ್ಲ’ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ತಿಳಿಸಿದ್ದಾರೆ.