ಇಸ್ರೋ ಉಪಗ್ರಹ ಡಾಕಿಂಗ್‌ 2ನೇ ಬಾರಿ ಯಶಸ್ವಿ : ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು

| N/A | Published : Apr 22 2025, 01:46 AM IST / Updated: Apr 22 2025, 06:02 AM IST

ಸಾರಾಂಶ

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗಿದ್ದ ಸ್ಪೇಡೆಕ್ಸ್‌ ಉಪಗ್ರಹಗಳ ಡಾಕಿಂಗ್‌ಅನ್ನು ಇಸ್ರೋ 2ನೇ ಬಾರಿ ಯಶಸ್ವಿಯಾಗಿ ನಡೆಸಿದೆ.

 ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗಿದ್ದ ಸ್ಪೇಡೆಕ್ಸ್‌ ಉಪಗ್ರಹಗಳ ಡಾಕಿಂಗ್‌ಅನ್ನು ಇಸ್ರೋ 2ನೇ ಬಾರಿ ಯಶಸ್ವಿಯಾಗಿ ನಡೆಸಿದೆ. ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದರ್‌ ಸಿಂಗ್‌ ಎಕ್ಸ್‌ನಲ್ಲಿ ಮಾಹಿತಿ ನೀಡಿ, ‘ಮುಂದಿನ ಪ್ರಯೋಗಗಳನ್ನು 2 ವಾರಗಳಲ್ಲಿ ಯೋಜಿಸಲಾಗುವುದು. ಏ.20ರ ರಾತ್ರಿ 8.20ಕ್ಕೆ ಡಾಕಿಂಗ್ ಆಗಿದೆ’ ಎಂದು ತಿಳಿಸಿದ್ದಾರೆ. 

ಸ್ಪೇಸ್ ಡಾಕಿಂಗ್ ಪ್ರಯೋಗ (ಸ್ಪೇಡೆಕ್ಸ್‌)ದ ಭಾಗವಾಗಿ 2024ರ ಡಿ.30ರಂದು ಇಸ್ರೋ, ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್‌02 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅವುಗಳು ಈ ವರ್ಷ ಜ.16ರಂದು ಡಾಕ್‌(ಒಂದಕ್ಕೊಂದು ಕೂಡಿಕೊಳ್ಳುವುದು) ಆಗಿದ್ದವು. ಬಳಿಕ ಮಾ.13ರಂದು ಅನ್‌ಡಾಕಿಂಗ್‌ (ಬೇರ್ಪಡುವಿಕೆ) ಕೂಡ ಯಶಸ್ವಿಯಾಗಿ ನೆರವೇರಿತ್ತು. 

ಈ ಮೂಲಕ, ಅಮೆರಿಕ, ರಷ್ಯಾ, ಚೀನಾ ಬಳಿಕ ಡಾಕಿಂಗ್‌ ಕಲೆ ಸಿದ್ಧಿಸಿಕೊಂಡ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಈ ಪ್ರಯೋಗವು ಭಾರತೀಯ ಅಂತರಿಕ್ಷ ಕೇಂದ್ರ ನಿರ್ಮಾಣ, ಸೇರಿದಂತೆ ಗಗನಯಾನಿಗಳನ್ನು ಚಂದ್ರನ ಅಂಗಳಕ್ಕೆ ಕಳಿಸುವುದು, ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಿ ತರುವುದು ಇತ್ಯಾದಿಗಳಿಗೆ ಉಪಯುಕ್ತ.