ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆ : ಕೆರೋಸಿನ್‌ ಎಂಜಿನ್ ಅಭಿವೃದ್ಧಿಯಲ್ಲಿ ಯಶಸ್ವಿ

| N/A | Published : Mar 30 2025, 03:04 AM IST / Updated: Mar 30 2025, 04:32 AM IST

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆ : ಕೆರೋಸಿನ್‌ ಎಂಜಿನ್ ಅಭಿವೃದ್ಧಿಯಲ್ಲಿ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಉಡಾವಣಾ ವಾಹನವಾದ ಮಾರ್ಕ್-3ರ ಬೂಸ್ಟರ್ ಹಂತಕ್ಕೆ ಶಕ್ತಿ ತುಂಬಲು ದ್ರವರೂಪದ ಆಮ್ಲಜನಕ ಅಥವಾ ಕೆರೋಸಿನ್‌ ಬಳಸುವ ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅಭಿವೃದ್ಧಿಪಡಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಉಡಾವಣಾ ವಾಹನವಾದ ಮಾರ್ಕ್-3ರ ಬೂಸ್ಟರ್ ಹಂತಕ್ಕೆ ಶಕ್ತಿ ತುಂಬಲು ದ್ರವರೂಪದ ಆಮ್ಲಜನಕ ಅಥವಾ ಕೆರೋಸಿನ್‌ ಬಳಸುವ ಸೆಮಿ-ಕ್ರಯೋಜೆನಿಕ್ ಎಂಜಿನ್‌ (ಕೆರೋಸಿನ್‌ ಎಂಜಿನ್‌) ಅನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಇದರ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿದ್ದು, ಈ ವೇಳೆ 2.5 ಸೆಕೆಂಡುಗಳ ಕಾಲ ಸುಗಮ ದಹನ ಮತ್ತು ಬೂಸ್ಟ್‌ಸ್ಟ್ರಾಪ್ ಮೋಡ್ ಕಾರ್ಯಾಚರಣೆ(ಬಾಹ್ಯ ಶಕ್ತಿಗಳ ಸಹಾಯವಿಲ್ಲದೆ ದಹನ ಮುಂದುವರೆಸುವುದು ಮತ್ತು ಅದಕ್ಕಾಗಿ ತನ್ನ ಆಂತರಿಕ ಒತ್ತಡ, ಶಕ್ತಿ ಬಳಸುವುದು)ಯನ್ನು ಎಂಜಿನ್‌ ಪ್ರದರ್ಶಿಸಿರುವುದಾಗಿ ಇಸ್ರೋ ತಿಳಿಸಿದೆ.

ಈ ಮೂಲಕ ಪ್ರೀ-ಬರ್ನರ್‌, ಟರ್ಬೋ ಪಂಪ್‌, ಆರಂಭಿಕ ವ್ಯವಸ್ಥೆ ಮತ್ತು ನಿಯಂತ್ರಣ ಉಪಕರಣಗಳಂತಹ ನಿರ್ಣಾಯಕ ಉಪವ್ಯವಸ್ಥೆಯ ಸಮಗ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿದೆ. ಈ ಸಂಬಂಧ ಇನ್ನೂ ಅನೇಕ ಪರೀಕ್ಷೆಗಳು ನಡೆಯಲಿವೆ.

2 ಸಾವಿರ ಕಿಲೋನ್ಯೂಟನ್‌ನಷ್ಟು ಥ್ರಸ್ಟ್‌(ಮುಂದೆ ಚಲಿಸಲು ಅಗತ್ಯವಾದ ಶಕ್ತಿ) ನೀಡುವ ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಭವಿಷ್ಯದ ಉಡಾವಣಾ ವಾಹನಗಳ ಪೇಲೋಡ್‌ಗಳನ್ನು ಉತ್ತಮಗೊಳಿಸಲು ಮತ್ತು ಬೂಸ್ಟರ್ ಹಂತಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಇದರಿಂದ ಪೇಲೋಡ್‌ನ ಸಾಮರ್ಥ್ಯ 4 ಟನ್‌ನಿಂದ 5 ಟನ್‌ಗೆ ಹೆಚ್ಚಳವಾಗಲಿದೆ.

ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಮೊದಲ ಬಾರಿ ಮಾ.28ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. 

ಪ್ರಯೋಜನವೇನು?:

ಸಾಮಾನ್ಯವಾಗಿ ಕ್ರಯೋಜೆನಿಕ್ ಎಂಜಿನ್‌ಗಳು ದ್ರವ ರೂಪದ ಹೈಡ್ರೋಜನ್‌ ಬಳಸುತ್ತವೆ. ಆದರೆ ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳು ಕೆರೋಸಿನ್‌ ಬಳಸಲಿದ್ದು, ಇದು ದ್ರವ ರೂಪದ ಇಂಧನಕ್ಕಿಂತ ಹಗುರವಿರುತ್ತದೆ. ಜೊತೆಗೆ ಸಾಮಾನ್ಯ ತಾಪಮಾನದಲ್ಲೂ ಇದನ್ನು ಶೇಖರಿಸಿಡುವುದು ಸುಲಭ.