ಟಿಎಂಸಿ ನಾಯಕ ಶಹಜಹಾನ್‌ ಶರಣಾಗತಿಗೆ ಕೋರ್ಟ್‌ ಆದೇಶ

| Published : Feb 21 2024, 02:00 AM IST / Updated: Feb 21 2024, 12:27 PM IST

ಶಹಜಹಾನ್
ಟಿಎಂಸಿ ನಾಯಕ ಶಹಜಹಾನ್‌ ಶರಣಾಗತಿಗೆ ಕೋರ್ಟ್‌ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸಂದೇಶ್‌ ಖಾಲಿ ಭೇಟಿಗೆ ನ್ಯಾಯಾಲಯ ಅನುಮತಿ ನೀಡಿದೆ. ಒಬ್ಬ ವ್ಯಕ್ತಿ ಇಡೀ ವ್ಯವಸ್ಥೆಯನ್ನೇ ಅತಂತ್ರ ಮಾಡಲು ಅವಕಾಶ ನೀಡಲ್ಲ. ಶಹಜಹಾನ್‌ರಂಥ ವ್ಯಕ್ತಿಗೆ ಬೆಂಬಲ ನೀಡಕೂಡದು ಎಂದು ಹೈಕೋರ್ಟ್‌ ತಿಳಿಸಿದೆ.

ಕೋಲ್ಕತಾ: ಇತ್ತೀಚೆಗೆ ಪ.ಬಂಗಾಳದಲ್ಲಿ ಪಡಿತರ ಹಗರಣ ನಡೆಸಿರುವ ಆರೋಪ ಹೊತ್ತು ಪರಾರಿ ಆಗಿರುವ ಟಿಎಂಸಿ ನಾಯಕ ಶೇಖ್‌ ಶಹಜಹಾನ್‌ ಹಾಗೂ ರಾಜ್ಯದ ಸಂದೇಶ್‌ಖಾಲಿಯಲ್ಲಿ ಶಹಜಹಾನ್‌ ಬೆಂಬಲಿಗ ಟಿಎಂಸಿ ಕಾರ್ಯಕರ್ತರಿಂದ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ತಲೆಮರೆಸಿಕೊಂಡಿರುವ ಶಹಜಹಾನ್‌ಗೆ ತನ್ನ ಮುಂದೆ ಶರಣಾಗುವಂತೆ ಕೋರ್ಟ್‌ ಆದೇಶಿಸಿದೆ.ಇದಲ್ಲದೆ, ಮಂಗಳವಾರ ಸಂದೇಶ್‌ಖಾಲಿಗೆ ಭೇಟಿ ನೀಡಿ ಅತ್ಯಾಚಾರ ಸಂತ್ರಸ್ತೆಯರ ಅಹವಾಲು ಆಲಿಸಲು ಬಿಜೆಪಿ ಮುಖಂಡ ಹಾಗೂ ವಿಧಾನಸಭಾ ವಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಅನುಮತಿ ನೀಡಿದೆ.

ಭೇಟಿಗೆ ನಿರ್ಬಂಧಿಸಿದ್ದ ಪ.ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ಸೂಚನೆ ಪ್ರಶ್ನಿಸಿ ಅಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ‘ಒಬ್ಬ ವ್ಯಕ್ತಿ (ಶಹಜಹಾನ್‌) ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಸಾಧ್ಯವಿಲ್ಲ. ಆತನೇ ಸಂದೇಶ್‌ಖಾಲಿಯಲ್ಲಿ ಹಾನಿ ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. 

ಆತ ಕೋರ್ಟ್‌ ಮುಂದೆ ಶರಣಾಗಬೇಕು. ಅಂಥವನನ್ನು ರಾಜ್ಯ ಸರ್ಕಾರ ಬೆಂಬಲಿಸುತ್ತಿರುವುದೇಕೆ? ರಾಜ್ಯದ ಪೊಲೀಸರು ಆತನನ್ನು ಬಂಧಿಸುತ್ತಿಲ್ಲವೇಕೆ?’ ಎಂದು ಕಿಡಿಕಾರಿತು.

ಇದಲ್ಲದೆ ಸಂದೇಶ್‌ಖಾಲಿಯಲ್ಲಿ ಮಹಿಳಾ ಸಂತ್ರಸ್ತರಿಗೆ ಏಕೆ ಬಂಗಾಳ ಸರ್ಕಾರ ಮಾತನಾಡಲು ಅವಕಾಶ ನೀಡುತ್ತಿಲ್ಲ? ಅಲ್ಲೇಕೆ ಪ್ರತಿಬಂಧಕಾಜ್ಞೆ ಹೇರಿದೆ ಎಂದು ಪ್ರಶ್ನಿಸಿದ ಪೀಠ, ಸಂತ್ರಸ್ತರಿಗೆ ಮಾತನಾಡಲು ಅವಕಾಶ ನೀಡಬೇಕು.

 ಸಂತ್ರಸ್ತರು ಹೇಳಿದಾಕ್ಷಣ ಶಹಜಹಾನ್‌ ದೋಷಿ ಆಗಲ್ಲ. ಅದು ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ ಎಂದಿತು.ಇದೇ ವೇಳೆ, ಸಂತ್ರಸ್ತರ ಅಹವಾಲು ಆಲಿಕೆಗೆ ಸುವೇಂದು ಅಧಿಕಾರಿ ಮಂಗಳವಾರ ಹೋಗಲು ಅನುಮತಿಸುತ್ತಿದ್ದೇವೆ, ಅವರಿಗೆ ಭದ್ರತೆ ನೀಡಬೇಕು. 

ಅಹಿತಕರ ಘಟನೆ ನಡೆಯದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಸೂಚಿಸಿತು.

ಏನಿದು ಪ್ರಕರಣ?: ಪ.ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಕಳೆದ ತಿಂಗಳು ಇ.ಡಿ. ಅಧಿಕಾರಿಗಳು ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಶಹಜಹಾನ್ ಆಸ್ತಿಗಳ ಮೇಲೆ ದಾಳಿ ಮಾಡಿದ್ದರು. ಆಗ ಶಹಜಹಾನ್‌ ಪರಾರಿ ಆಗಿದ್ದ. ಈ ವೇಳೆ ಟಿಎಂಸಿ ಕಾರ್ಯಕರ್ತರಿಂದ ಗಲಭೆ ನಡೆದಿತ್ತು. 

ಇದೇ ವೇಳೆ, ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಕೆಲವು ಶಹಜಹಾನ್‌ ಬೆಂಬಲಿಗ ಟಿಎಂಸಿ ಕಾರ್ಯಕರ್ತರು ಸುಂದರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಇತ್ತೀಚೆಗೆ 17 ಶಹಜಹಾನ್‌ ಬೆಂಬಲಿಗರನ್ನು ಬಂಧಿಸಲಾಗಿದೆ.