ಅಧೀನ ನ್ಯಾಯಾಲಯದ ತೀರ್ಪು ರದ್ದು ಕೋರಿ ತಮಿಳುನಾಡಿನ ಕಾಂಚಿಪುರದ ಕಡಂಬನ್‌ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್‌ ಆದೇಶ ಮಾಡಿದೆ. ಈ ಮೂಲಕ ಕಾನೂನು ತಿದ್ದುಪಡಿಗೂ ಮುನ್ನ ನಡೆದ ಅಪರಾಧಕ್ಕೆ ತಿದ್ದುಪಡಿ ಕಾನೂನಿನಡಿ ಶಿಕ್ಷೆ ವಿಧಿಸಿದ ತೀರ್ಪನ್ನು ರದ್ದು ಮಾಡಿದೆ.

ವೆಂಕಟೇಶ್ ಕಲಿಪಿ

 ಬೆಂಗಳೂರು : ಪ್ರಸ್ತುತ ನಡೆದ ಕ್ರಿಮಿನಲ್‌ ಅಪರಾಧಗಳಿಗೆ ತಿದ್ದುಪಡಿಯಾಗುವ ಮುನ್ನ ಅಸ್ವಿತ್ವದಲ್ಲಿದ್ದ ಕಾನೂನುಗಳನ್ನು ಪೂರ್ವಾನ್ವಯಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, 2013ರ ಫೆಬ್ರವರಿಯಿಂದ ಜಾರಿಗೆ ಬಂದ ಕ್ರಿಮಿನಲ್‌ ಕಾನೂನು (ತಿದ್ದುಪಡಿ) ಅನ್ವಯಿಸಿ 2011ರಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾ*ರ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ರದ್ದುಪಡಿಸಿ ಆದೇಶ ನೀಡಿದೆ.

ಅಧೀನ ನ್ಯಾಯಾಲಯದ ತೀರ್ಪು ರದ್ದು ಕೋರಿ ತಮಿಳುನಾಡಿನ ಕಾಂಚಿಪುರದ ಕಡಂಬನ್‌ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್‌ ಈ ಆದೇಶ ಮಾಡಿದೆ. ಈ ಮೂಲಕ ಕಾನೂನು ತಿದ್ದುಪಡಿಗೂ ಮುನ್ನ ನಡೆದ ಅಪರಾಧಕ್ಕೆ ತಿದ್ದುಪಡಿ ಕಾನೂನಿನಡಿ ಶಿಕ್ಷೆ ವಿಧಿಸಿದ ತೀರ್ಪನ್ನು ರದ್ದು ಮಾಡಿದೆ.

ಕೋರ್ಟ್‌ ಮುಂದೆ ಸಾಕ್ಷ್ಯ ನುಡಿದ ಸಂದರ್ಭ

ಸಂಭೋಗಕ್ಕೆ ಒಪ್ಪಿಗೆಯಿರಲಿಲ್ಲವೆಂದು ಮಹಿಳೆ ಕೋರ್ಟ್‌ ಮುಂದೆ ಸಾಕ್ಷ್ಯ ನುಡಿದ ಸಂದರ್ಭದಲ್ಲಿ, ಒಪ್ಪಿಗೆಯ ಅನುಪಸ್ಥಿತಿಯನ್ನು ನ್ಯಾಯಾಲಯ ಊಹಿಸಲು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್‌ 114ಎ ಅವಕಾಶ ಕಲ್ಪಿಸಿದೆ. ಈ ನಿಯಮವನ್ನು ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ-1983ರ ಮೂಲಕ ಅಳವಡಿಕೆ ಮಾಡಲಾಗಿದೆ. ಈ ಕ್ರಿಮಿನಲ್‌ ಕಾನೂನಿಗೆ ನಂತರ 2013ರ ಫೆ.3ರಂದು ತಿದ್ದುಪಡಿ ಮಾಡಲಾಗಿತ್ತು. ಅದರಂತೆ ಲೈಂಗಿಕ ಸಂಭೋಗಕ್ಕೆ 16 ವರ್ಷ ತುಂಬಿರದ ಅಪ್ರಾಪ್ತೆ ನೀಡುವ ಒಪ್ಪಿಗೆಗೆ ಮಾನ್ಯತೆಯೇ ಇಲ್ಲ. ತಿದ್ದುಪಡಿ ನಿಯಮ ಜಾರಿಗೆ ಬರುವ ಮುನ್ನ ಅಂದರೆ 2011ರ ಮೇ 31ರಂದು ಈ ಅತ್ಯಾಚಾರ ಮತ್ತು ಸಂಭೋಗ ನಡೆಸುವ ಉದ್ದೇಶದಿಂದ ಮಹಿಳೆಯನ್ನು ಪ್ರೇರೇಪಿಸಿದ ಘಟನೆ ನಡೆದಿದೆ. ಹೀಗಾಗಿ ಈ ಪ್ರಕರಣಕ್ಕೆ ತಿದ್ದುಪಡಿಯಾದ ಕಾನೂನು ಅನ್ವಯಿಸಿರುವುದು ಸರಿಯಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ, ಲೈಂಗಿಕ ಸಂಭೋಗಕ್ಕೆ ಮಹಿಳೆ ಒಪ್ಪಿಗೆ ನೀಡಿರುವ ಕುರಿತು ಆಕೆಯ ಸಾಕ್ಷ್ಯ, ಡಿಎನ್‌ಎಯಂಥ ವೈಜ್ಞಾನಿಕ ಸಾಕ್ಷ್ಯ ಲಭ್ಯವಿಲ್ಲದಿದ್ದಾಗ ಅತ್ಯಾಚಾರ ಪ್ರಕರಣದಲ್ಲಿ ಒಪ್ಪಿಗೆ ಇರುವ ಅಂಶ ಸಾಬೀತುಪಡಿಸುವುದು ಕಷ್ಟ. ಅಂಥ ಸಂದರ್ಭದಲ್ಲಿ ಮಹಿಳೆಯ ಒಪ್ಪಿಗೆ ಇತ್ತು ಎಂಬುದನ್ನು ದೃಢಪಡಿಸುವ ಹೊಣೆ ಆರೋಪಿ ಮೇಲೆ ಹೊರಿಸುವ ಮೂಲಕ ಅತ್ಯಾಚಾರ ಪ್ರಕರಣ ಸಾಬೀತುಪಡಿಸಲು ಭಾರತೀಯ ಸಾಕ್ಷ್ಯ114ಎ ಅಡಿ ಪ್ರಾಸಿಕ್ಯೂಷನ್‌ಗೆ ನೆರವಾಗುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಆರೋಪಿಯನ್ನು ಪ್ರೀತಿಸುತ್ತಿದ್ದಳು. ಸ್ವ-ಇಚ್ಛೆಯಿಂದ ಆತನನೊಂದಿಗೆ ಕಾಂಚಿಪುರಕ್ಕೆ ತೆರಳಿ ಒಟ್ಟಿಗೆ ನೆಲೆಸಿದ್ದಳು. ಹೀಗಾಗಿ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 114A ಅಡಿ ಕಡ್ಡಾಯ ಊಹೆ ಅನ್ವಯವಾಗುವುದಿಲ್ಲ. ಮೇಲಾಗಿ ಒಪ್ಪಿಗೆಯ ಅನುಪಸ್ಥಿತಿ ಸಾಬೀತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್ ಮೇಲಿರುತ್ತದೆ ಎಂದು ಪೀಠ ಹೇಳಿದೆ.

ಪ್ರಕರಣವೇನು?:

ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ 16 ವರ್ಷದ ತುಂಬದ ಸಂತ್ರಸ್ತೆಯನ್ನು ಮನೆಯಿಂದ ಕರೆದುಕೊಂಡು ಹೋಗುವ ಮೂಲಕ ಅಪಹರಿಸಿದ ಮತ್ತು ಆಕೆ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಬಲವಂತವಾಗಿ ಸಂಭೋಗ ನಡೆಸಿದ ಆರೋಪದ ಮೇಲೆ ಕಡಂಬನ್‌ ವಿರುದ್ಧ 2011ರ ಮೇ 31ರಂದು ಬೆಳ್ಳಾವಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ತುಮಕೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌, ಕಡಂಬನ್‌ಗೆ ಐಪಿಸಿ ಸೆಕ್ಷನ್‌ 376 ಅಡಿ ಅತ್ಯಾಚಾರ (ಬಲವಂತದ ಸಂಭೋಗ) ಅಪರಾಧಕ್ಕೆ 8 ವರ್ಷ ಕಠಿಣ ಜೈಲು, ಸೆಕ್ಷನ್‌ 366ಎ ಅಡಿ 18 ವರ್ಷದೊಳಗಿನ ಅಪ್ರಾಪ್ತೆಯನ್ನು ಒಂದು ಸ್ಥಳದಿಂದ ಹೊರಹೋಗಲು ಮತ್ತು ಸಂಭೋಗ ನಡೆಸಲು ಪ್ರೇರೇಪಿಸಿದ ಅಪರಾಧಕ್ಕೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ 2014ರ ಜೂ.28ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ದೂರಿನಲ್ಲಿ ಹೇಳಿರುವಂತೆ 18 ವರ್ಷದೊಳಗಿನ ಅಪ್ರಾಪ್ತೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದಾಗ ಅಪಹರಣವಾಗುತ್ತದೆ. ಆದರೆ, ಯಾವುದೇ ಉದ್ದೇಶಕ್ಕಾದರೂ ಅಪ್ರಾಪ್ತೆಯನ್ನು ಅಪಹರಣ ಮಾಡಿದ್ದರೂ ಆ ಅಪರಾಧ ಸಂತ್ರಸ್ತೆಯ ಸಾಕ್ಷ್ಯದಿಂದ ಸಾಬೀತಾಗಬೇಕಾಗುತ್ತದೆ. ಪ್ರಕರಣದಲ್ಲಿ ಸಂತ್ರಸ್ತೆಯೇ ಸ್ವ-ಇಚ್ಛೆಯಿಂದ ಆರೋಪಿ ಜೊತೆಗೆ ಹೋಗಿದ್ದಾಳೆ. ಶೈಕ್ಷಣಿಕ ದಾಖಲೆಗಳ ಪ್ರಕಾರ ಆಗ ಆಕೆಗೆ 16 ವರ್ಷ, 2 ತಿಂಗಳು, 18 ದಿನ. ಆರೋಪಿಯೊಂದಿಗೆ ಒಪ್ಪಿತ ಸಂಬಂಧವಿರುವುದಾಗಿ ಸಂತ್ರಸ್ತೆ ಹೇಳಿದ್ದಾಳೆ. ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿಲ್ಲ, ಬಲವಂತದ ಲೈಂಗಿಕ ಕ್ರಿಯೆ ನಡೆದಿರುವ ಕುರುಹೂ ಇಲ್ಲ ಎಂದು ವೈದ್ಯಕೀಯ ದಾಖಲೆ ಹೇಳುತ್ತವೆ. ಇದರಿಂದ ಅಪರಾಧ ಸಾಬೀತಾಗುವುದಿಲ್ಲ ಎಂದ ಹೈಕೋರ್ಟ್‌ ಆರೋಪಿಯನ್ನು ಖುಲಾಸೆಗೊಳಿಸಿದೆ.