ಸಾರಾಂಶ
ಕರಾಚಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಿಂದ ಪಲಾಯನ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ.
ಅನೇಕ ವರ್ಷಗಳಿಂದ ಪಾಕಿಸ್ತಾನದ ಕರಾಚಿ ನಗರದಲ್ಲಿ ದಾವೂದ್ ಇಬ್ರಾಹಿಂ, ಅವನ ವಿಶೇಷ ಸಹಾಯಕರಾದ ಚೋಟಾ ಶಕೀಲ್ ಮತ್ತು ಮುನ್ನಾ ಜಿಂಗ್ರಾರನ್ನು ಪಾಕ್ ಅಡಗಿಸಿಟ್ಟಿದೆ. ಆದರೆ ಕರಾಚಿ ಮೇಲೆಯೇ ಭಾರತ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಮಾಡಿದ ಕಾರಣ, ಮೂಲಗಳು ಹೇಳುವಂತೆ ಮೂವರೂ ಪ್ರಸ್ತುತ ಪಾಕಿಸ್ತಾನವನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ.
ಆದಾಗ್ಯೂ ಏಜೆನ್ಸಿ ಮೂಲಗಳು ಈ ಮಾಹಿತಿಯ ಮೇಲೆ ನಿಗಾ ಇಡುತ್ತಿವೆ ಮತ್ತು ದಾವೂದ್ ಮತ್ತು ಅವನ ಬೆಂಬಲಿಗರು ಪಾಕಿಸ್ತಾನದಲ್ಲೇ ಬೇರೆಡೆ ಇರಬಹುದು ಎಂದು ಊಹಿಸುತ್ತಿದ್ದಾರೆ ಮತ್ತು ದಾರಿ ತಪ್ಪಿಸಲು ಇಂತಹ ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದು ಹೇಳಿವೆ.
ಹೋಶಿಯಾರ್‌ಪುರ (ಪಂಜಾಬ್): ಭಾರತ- ಪಾಕ್ ಪರಿಸ್ಥಿತಿ ಉದ್ವಿಗ್ನ ನಡುವೆಯೇ ಪಂಜಾಬ್‌ನ ಹೋಶಿಯಾರ್‌ಪುರದ ಗ್ರಾಮವೊಂದರಲ್ಲಿ ಪಾಕಿಸ್ತಾನ ಹಾರಿಬಿಟ್ಟ ಚೀನಿ ನಿರ್ಮಿತ ಪಿಲ್-15 ಕ್ಷಿಪಣಿಯ ಅವಶೇಷ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಬಠಿಂಡಾದಲ್ಲೂ ಕೂಡ ಪಾಕ್ ನಿರ್ಮಿತ ಕ್ಷಿಪಣಿ ಅವಶೇಷ ಸಿಕ್ಕಿದೆ. ಇದರಿಂದಾಗಿ ಪಾಕ್‌ಗೆ ಚೀನಾ ಸೇನಾ ನೆರವು ಮತ್ತೊಮ್ಮೆ ಸಾಬೀತಾಗಿದೆ.ಹೋಶಿಯಾರ್‌ಪುರದ ಕಾಮಾಹಿ ದೇವಿ ಗ್ರಾಮದಲ್ಲಿ ಗುರುವಾರ ಸಂಜೆ ಕ್ಷಿಪಣಿ ಅವಶೇಷಗಳು ಪತ್ತೆಯಾಗಿದೆ. ವಾಯುಪಡೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ . ಇದು ಚೀನಾ ನಿರ್ಮಿತ ಪಿಲ್-15 ಕ್ಷಿಪಣಿ ಆಗಿದ್ದು, ಇದನ್ನು ಪಾಕ್ ಹಾರಿಸಿ ಬಿಟ್ಟಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಈ ನಡುವೆ ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವೀಯ ‘ಇದು ಚೀನಿ ನಿರ್ಮಿತ ಪಿಎಲ್-15 ಕ್ಷಿಪಣಿ ಆಗಿದ್ದು ಅದು ಸಂಪೂರ್ಣ ಹಾನಿಗೊಳಗಾದ ಸ್ಥಿತಿಯಲ್ಲಿದೆ’ ಎಂದಿದ್ದಾರೆ.ಭಾರತವು ಈ ಕ್ಷಿಪಣಿಯನ್ನು ಅಧ್ಯಯನಕ್ಕೆ ಒಳಪಡಿಸುವ ಸಾಧ್ಯತೆಯಿದೆ. ಇದರ ಅಧ್ಯಯನದಿಂದ ಭಾರತೀಯ ರಕ್ಷಣಾ ವಿಜ್ಞಾನಿಗಳು ಮತ್ತು ಅಧಿಕಾರಿಗಳಿಗೆ ಆಂತರಿಕ ವ್ಯವಸ್ಥೆಗಳನ್ನು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ.
ಕಾಶ್ಮೀರ ವಿಷಯದಲ್ಲಿ ತಲೆ ಹಾಕಲ್ಲ: ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ‘ನಾವು ಈ ವಿಷಯದಲ್ಲಿ ಮೂಗುತೂರಿಸಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.,ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿದ ವ್ಯಾನ್ಸ್, ‘ಭಾರತಕ್ಕೆ ಪಾಕಿಸ್ತಾನದ ಮೇಲೆ ತನ್ನದೇ ಆದ ದ್ವೇಷವಿದೆ. ಪಾಕಿಸ್ತಾನವೂ ಇದಕ್ಕೆ ಪ್ರತಿಕ್ರಿಯಿಸುತ್ತಿದೆ. ಅವರನ್ನು ನಾವು ನಿಯಂತ್ರಿಸಲಾಗದು. ಎರಡೂ ಅಣ್ವಸ್ತ್ರ ದೇಶಗಳಾಗಿರುವ ಕಾರಣ, ಇದು ಪ್ರಾದೇಶಿಕ ಯುದ್ಧ ಅಥವಾ ಪರಮಾಣು ಸಂಘರ್ಷಕ್ಕೆ ಮುನ್ನುಡಿಯಾಗದಿರಲಿ ಎಂದು ನಿರೀಕ್ಷಿಸುತ್ತಿದ್ದೇವೆ. ಈ ಕ್ಷಣಕ್ಕೆ ಹೀಗಾಗದು’ ಎಂದರು,
ಅಂತೆಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಾಜ್ಯ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಹೇಳಿಕೆಯನ್ನು ಉಲ್ಲೇಖಿಸಿ. ‘ಉದ್ವಿಗ್ನತೆ ನಿಯಂತ್ರಿಸಲು ನಾವು ರಾಜತಾಂತ್ರಿಕ ಮಾರ್ಗದ ಮೂಲಕ ಯತ್ನಿಸುತ್ತೇವೆ’ ಎಂದು ವ್ಯಾನ್ಸ್ ಹೇಳಿದರು.