ವಕ್ಫ್‌ ಕಾಯ್ದೆ ಜಾರಿ : ಪ್ರಧಾನಿ ನರೇಂದ್ರ ಮೋದಿಗೆ ದಾವೂದಿ ಬೊಹ್ರಾ ಸಮುದಾಯ ಕೃತಜ್ಞತೆ

| N/A | Published : Apr 18 2025, 12:32 AM IST / Updated: Apr 18 2025, 06:29 AM IST

ಸಾರಾಂಶ

ದಾವೂದಿ ಬೊಹ್ರಾ ಸಮುದಾಯದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ವಕ್ಫ್ (ತಿದ್ದುಪಡಿ) ಕಾಯ್ದೆಯಡಿ ತಮ್ಮ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದೆ.

ನವದೆಹಲಿ: ದಾವೂದಿ ಬೊಹ್ರಾ ಸಮುದಾಯದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ವಕ್ಫ್ (ತಿದ್ದುಪಡಿ) ಕಾಯ್ದೆಯಡಿ ತಮ್ಮ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಮೋದಿ ಅವರ ದೃಷ್ಟಿಕೋನದಲ್ಲಿ ನಂಬಿಕೆ ಇಟ್ಟ ಸಮುದಾಯದ ಸದಸ್ಯರು ಇದು ತಮ್ಮ ಬಹುಕಾಲದ ಬೇಡಿಕೆ ಆಗಿತ್ತು ಎಂದು ಮೋದಿ ಅವರಿಗೆ ತಿಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೂ ಇದ್ದರು.

ನಟ ಶೈನ್‌ರಿಂದ ಸೆಟ್ಟಲ್ಲೇ ಡ್ರಗ್ಸ್ ಸೇವನೆ: ನಟಿ ವಿನ್ಸಿ ಕಿಡಿ

ತಿರುವನಂತಪುರಂ: ‘ನಟ ಶೈನ್ ಟಾಮ್ ಚಾಕೊ ಸಿನಿಮಾ ಸೆಟ್‌ನಲ್ಲಿ ಮಾದಕವಸ್ತು ಸೇವಿಸುತ್ತಾರೆ ಹಾಗೂ ಸಹನಟಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ’ ಎಂದು ಖ್ಯಾತ ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಸ್ಫೋಟಕ ಆರೋಪ ಮಾಡಿದ್ದಾರೆ. 

ಆದರೆ ಪೊಲೀಸರಿಗೆ ದೂರಲು ಹಿಂದೇಟು ಹಾಕಿದ್ದಾರೆ.ಫಿಲಂ ಚೇಂಬರ್‌ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ಕ್ಕೆ ದೂರು ನೀಡಿರುವ ವಿನ್ಸಿ, ‘ಸೂತ್ರವಾಕ್ಯಂ ಚಿತ್ರದ ಸೆಟ್ಟಿನಲ್ಲಿ ಪೂರ್ವಾಭ್ಯಾಸದ ವೇಳೆ ಶೈನ್ ಬಿಳಿಯ ಪುಡಿಯೊಂದನ್ನು ಉಗುಳುತ್ತಿದ್ದರು. ಅವರು ಡ್ರಗ್ಸ್‌ ಸೇವಿಸುತ್ತಿದ್ದರು ಎಂಬುದಕ್ಕೆ ಇದೇ ಸಾಕ್ಷಿ. 

ಜೊತೆಗೆ, ನನ್ನ ಹಾಗೂ ಇತರೆ ಕಲಾವಿದೆಯರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತ ಅನುಚಿತವಾಗಿ ವರ್ತಿಸುತ್ತಾರೆ’ ಎಂದು ಹೇಳಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್‌ ಪ್ರಧಾನ ಕಾರ್ಯದರ್ಶಿ ಸಾಜೀ ನಂಥಿಯಾಟ್ಟು, ಶೈನ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 

ಅಂತೆಯೇ, ಕಲಾವಿದರ ಸಂಘ ಕೂಡ ನಟಿಯನ್ನು ಬೆಂಬಲಿಸುವುದಾಗಿ ತಿಳಿಸಿದೆ.ಈ ವರೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡದ ವಿನ್ಸಿ, ‘ವಿಚಾರಣೆಯ ಭಾಗವಾಗಿ ಪೊಲೀಸರು ನನ್ನನ್ನು ಸಂಪರ್ಕಿಸಿದರೆ ಅವರೊಂದಿಗೆ ಸಹಕರಿಸುವೆ’ ಎಂದಿದ್ದಾರೆ.ಈ ಮೊದಲು, ಮಾದಕವಸ್ತು ಸೇವನೆ ಪ್ರಕರಣದಲ್ಲಿ ವಶ ಮತ್ತು ಬಂಧನದ ಕಾರ್ಯವಿಧಾನದಲ್ಲಿ ಲೋಪವಾದ ಕಾರಣ ನೀಡಿ, ಶೈನ್‌ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2015ರಲ್ಲಿ ಖುಲಾಸೆಗೊಳಿಸಿತು.

ತಾಲಿಬಾನ್‌ ಮೇಲಿನ ರಷ್ಯಾ ನಿಷೇಧ ತೆರವು

ಮಾಸ್ಕೋ: ಮಹತ್ವದ ಬೆಳವಣಿಗೆಯಲ್ಲಿ, ಕಳೆದೆರಡು ದಶಕಗಳಿಂದ ಆಫ್ಘಾನಿಸ್ತಾನದ ತಾಲಿಬಾನ್‌ಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ರಷ್ಯಾದ ಸುಪ್ರೀಂ ಕೋರ್ಟ್‌ ತೆರವುಗೊಳಿಸಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಮೂಲಕ ಉಭಯ ದೇಶಗಳ ಸಂಬಂಧ ವೃದ್ಧಿಗೆ ಮುಂದಾದಂತಿದೆ.ಇದಕ್ಕೆ ಮಾಸ್ಕೋದಲ್ಲಿರುವ ಆಫ್ಘನ್‌ ದೂತಾವಾಸ ಪ್ರತಿಕ್ರಿಯಿಸಿದ್ದು, ‘ಇದರಿಂದ ಪರಸ್ಪರ ಸಹಕಾರ ವೃದ್ಧಿಯಾಗಲಿದೆ’ ಎಂದಿದೆ.2003ರಲ್ಲಿ ತಾಲಿಬಾನ್‌ಗಳನ್ನು ಉಗ್ರರು ಎಂದು ಪರಿಗಣಿಸಿ ರಷ್ಯಾ ಬ್ಯಾನ್‌ ಹೇರಿತ್ತು.

ಜಪಾನಿ ಮಹಿಳೆಗೆ ಮಸ್ಕ್‌ ವೀರ್ಯದಾನ: ವರದಿ

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಆಪ್ತ ಎಲಾನ್‌ ಮಸ್ಕ್‌ ಈಗಾಗಲೇ 4 ಪತ್ನಿಯರು ಹಾಗೂ 14 ಮಕ್ಕಳ ಹೊಂದಿದ್ದು ಹಳೇ ಸುದ್ದಿ. ಈಗ ಜಪಾನ್‌ ಮೂಲದ ಶ್ರೀಮಂತ ಮಹಿಳೆಯೊಬ್ಬರಿಗೆ ಅವರು ಆಕೆಯ ಕೋರಿಕೆ ಮೇರೆಗೆ ತಮ್ಮನ್ನು ವೀರ್ಯ ದಾನಮಾಡಿದ್ದಾರೆ ಎಂದು ಮಾಧ್ಯಮವರದಿಯೊಂದು ಹೇಳಿದೆ.ಇದೇ ವೇಳೆ ಕ್ರಿಪ್ಟೋ ಕರೆನ್ಸಿ ಇನ್‌ಫ್ಲುಯೆನ್ಸರ್ ಟಿಫಾನಿ ಫಾಂಗ್ ಎಂಬ ಮಹಿಳೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಹಿಳೆಯರನ್ನು ಸಂಪರ್ಕಿಸುವ ಅವರು ತನ್ನ ಮಕ್ಕಳನ್ನು ಹೆರಲು ಕೋರಿಕೆ ಸಲ್ಲಿಸಿದ್ದರು. ಆದರೆ ಆಕೆ ಇದನ್ನು ನಿರಾಕರಿಸಿದ್ದಳು ಎಂದು ಗೊತ್ತಾಗಿದೆ.

ಇದಲ್ಲದೆ ಅನಧಿಕೃತವಾಗಿ ಆ್ಯಶ್ಲೆ ಕ್ಲೇರ್‌ ಎಂಬ ಮಹಿಳೆಯಿಂದ ಮಗು ಪಡೆದಿದ್ದ ಮಸ್ಕ್‌, ಆ ಮಗುವಿನ ತಂದೆ ತಾನೆಂದು ಹೇಳದಂತೆ 15 ಲಕ್ಷ ಡಾಲರ್‌ ಒನ್‌ ಟೈಂ ಪೇಮೆಂಟ್‌ ಹಾಗೂ ಮಾಸಿಕ 1 ಲಕ್ಷ ಡಾಲರ್‌ ಹಣದ ಆಮಿಷ ಒಡ್ಡಿದ್ದರು ಎಂದೂ ಮಾಧ್ಯಮವೊಂದು ವರದಿ ಮಾಡಿದೆ.

ಸೆನ್ಸೆಕ್ಸ್‌ 1508 ಅಂಕ ನೆಗೆತ: ಮತ್ತೆ 78 ಸಾವಿರಕ್ಕೆ ಜಿಗಿತ

ಮುಂಬೈ: ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ ಹೊಡೆತದಿಂದ ಕುಸಿದಿದ್ದ ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 1508 ಅಂಕ ಏರಿಕೆ ಕಂಡು ಮತ್ತೆ 78 ಸಾವಿರ ಅಂಕ ತಲುಪಿದೆ.ಸೆನ್ಸೆಕ್ಸ್ 1,508.91 ಅಂಕಗಳು ಅಥವಾ ಶೇ.1.96 ರಷ್ಟು ಜಿಗಿದು 78,616.77 ತಲುಪಿದರೆ, 78,553.20ಕ್ಕೆ ಸ್ಥಿರವಾಯಿತು.

ವಿದೇಶಿ ಸುಂಕದ ಕುರಿತು ಅಮೆರಿಕ-ಜಪಾನ್ ವ್ಯಾಪಾರ ಮಾತುಕತೆ ಫಲಪ್ರದ ಆಗುವ ನಿರೀಕ್ಷೆ ಕಂಡುಬಂದ ಕಾರಣ ವಿದೇಶಿ ಹೂಡಿಕೆದಾರರು ದೇಶೀಯ ಷೇರುಗಳಿಗೆ ಮರಳಿದ್ದರು. ಆದ್ದರಿಂದ ಷೇರು ಸೂಚ್ಯಂಕಗಳು ಗುರುವಾರ ಶೇ.2ರಷ್ಟು ಏರಿಕೆ ದಾಖಲಿಸಿವೆ ಎಂದು ವಿಶ್ಲೇಷಿಸಲಾಗಿದೆ.