ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಉಗ್ರ ನಾಯಕ ಬಲಿ

| Published : Sep 25 2024, 12:46 AM IST

ಸಾರಾಂಶ

ತನ್ನ ದೇಶದ ಮೇಲೆ ದಾಳಿ ನಡೆಸಿದ್ದ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಕಳೆದ 2 ದಿನಗಳಿಂದ ಇಸ್ರೇಲ್‌ ನಡೆಸುತ್ತಿರುವ ಭೀಕರ ವೈಮಾನಿಕ ದಾಳಿಯಲ್ಲಿ ಬಲಿಯಾದ ಲೆಬನಾನ್‌ ಜನರ ಸಂಖ್ಯೆ 560ಕ್ಕೆ ತಲುಪಿದೆ.

ಬೈರೂತ್‌: ತನ್ನ ದೇಶದ ಮೇಲೆ ದಾಳಿ ನಡೆಸಿದ್ದ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಕಳೆದ 2 ದಿನಗಳಿಂದ ಇಸ್ರೇಲ್‌ ನಡೆಸುತ್ತಿರುವ ಭೀಕರ ವೈಮಾನಿಕ ದಾಳಿಯಲ್ಲಿ ಬಲಿಯಾದ ಲೆಬನಾನ್‌ ಜನರ ಸಂಖ್ಯೆ 560ಕ್ಕೆ ತಲುಪಿದೆ. ಇದರ ನಡುವೆಯೇ ರಾಜಧಾನಿ ಬೈರೂತ್‌ನ ಕಟ್ಟಡವೊಂದರ ಮೇಲೆ ನಡೆದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಕ್ಷಿಪಣಿ ಘಟಕದ ಕಮಾಂಡರ್‌ ಇಬ್ರಾಹಿಂ ಕುಬೈಸಿ ಸೇರಿ 6 ಉಗ್ರರು ಹತರಾಗಿದ್ದಾರೆ.

ಈ ನಡುವೆ, ಮೃತರಲ್ಲಿ 50 ಮಕ್ಕಳು, 94 ಮಹಿಳೆಯರು ಕೂಡಾ ಸೇರಿದ್ದಾರೆ. 1835 ನಾಗರಿಕರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದು 2006ರ ಬಳಿಕ (18 ವರ್ಷ ಬಳಿಕ) ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ಅತ್ಯಂತ ಭೀಕರ ದಾಳಿ ಎಂದು ಸರ್ಕಾರ ಹೇಳಿಕೊಂಡಿದೆ.

ಇಸ್ರೇಲ್‌- ಹಮಾಸ್‌ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಿದ್ದ ಹಿಜ್ಬುಲ್ಲಾ ಉಗ್ರರು, ಇಸ್ರೇಲ್‌ನ ಸೇನಾನೆಲೆ ಮತ್ತು ಜನವಸತಿ ಪ್ರದೇಶಗಳ ಮೇಲೆ ರಾಕೆಟ್‌ ದಾಳಿ ನಡೆಸಿದ್ದರು. ಇದರಿಂದ ಸಿಡಿದೆದ್ದ ಇಸ್ರೇಲಿ ಸೇನೆ ಕಳೆದ 2 ದಿನಗಳಿಂದ ಹಿಜ್ಬುಲ್ಲಾ ಉಗ್ರರ ನೆಲೆ ಎನ್ನಲಾದ 300ಕ್ಕೂ ಹೆಚ್ಚು ಪ್ರದೇಶಗಳನ್ನು ಗುರಿಯಾಗಿಸಿ ರಾಕೆಟ್‌, ಕ್ಷಿಪಣಿ ದಾಳಿ ನಡೆಸಿತ್ತು. ಅದರಲ್ಲಿ 560 ಜನರು ಸಾವನ್ನಪ್ಪಿ, 2000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

==

ನಾಗರಿಕರ ಮಾನವ ಗುರಾಣಿ ಮಾಡಿರುವ ಉಗ್ರರು: ಇಸ್ರೇಲ್‌ಹಿಜ್ಬುಲ್ಲಾ ಉಗ್ರರು, ಇಸ್ರೇಲಿ ದಾಳಿ ತಡೆಯಲು ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದ್ದಾರೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆರೋಪಿಸಿದ್ದಾರೆ. ಅಲ್ಲದೆ ಕೂಡಲೇ ನಮ್ಮ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಜಾಗ ಖಾಲಿ ಮಾಡಿ ಎಂದು ನಾಗರಿಕರಿಗೆ ಮನವಿ ಮಾಡಿದ್ದಾರೆ.

==

ಜನವಸತಿ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಇಟ್ಟು ದಾಳಿ ತಡೆಗೆ ಯತ್ನ

ಹಿಜ್ಬುಲ್ಲಾ ಉಗ್ರರು, ಲೆಬನಾನಿನ ಪ್ರಮುಖ ನಗರಗಳ ಜನವಸತಿ ಪ್ರದೇಶಗಳಲ್ಲಿ ತಮ್ಮ ಶಸ್ತ್ರಾಸ್ತ್ರ ಅಡಗಿಸಿ ಇಟ್ಟಿದ್ದಾರೆ ಮತ್ತು ಅಲ್ಲಿಂದಲೇ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲಿ ಸೇನಾ ಪಡೆ ದಾಳಿ ನಡೆಸುತ್ತಿದೆ. ದಾಳಿಗೂ ಮುನ್ನ ಜಾಗ ಖಾಲಿ ಮಾಡುವಂತೆ ನಾಗರಿಕರಿಗೆ ಎಚ್ಚರಿಕೆ ಕೂಡಾ ನೀಡುತ್ತಿದೆ. ಆದರೆ ಹಿಜ್ಬುಲ್ಲಾ ಉಗ್ರರು, ನಾಗರಿಕರನ್ನು ಬಲವಂತವಾಗಿ ಅಲ್ಲೇ ಉಳಿಸಿ ಇಸ್ರೇಲಿ ದಾಳಿ ತಡೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.