ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ ಹಾಗೂ ಇತರ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
- ಸಂಪುಟದಲ್ಲಿ ಚರ್ಚೆ: ಡಿಕೆಶಿ
====ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ
--ಕನ್ನಡಪ್ರಭ ವಾರ್ತೆ ಬೆಳಗಾವಿಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ ಹಾಗೂ ಇತರ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಡಿಕೆಶಿಯವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದರು. ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ನಮಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸಬೇಕು ಎಂಬ ಉದ್ದೇಶವಿಲ್ಲ. ಆದರೆ, ಜನಜಂಗುಳಿಯಾದರೆ ಅದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಆಲೋಚಿಸಬೇಕು. ಜೊತೆಗೆ, ಮೈಕಲ್ ಡಿ.ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ, ಹಂತವಾಗಿ ಪಾಲನೆ ಮಾಡುವುದು ನಮ್ಮ ಆಲೋಚನೆ. ಇದನ್ನು ವೆಂಕಟೇಶ್ ಪ್ರಸಾದ್ ಕೂಡ ಒಪ್ಪಿಕೊಂಡಿದ್ದಾರೆ. ನಮ್ಮ ರಾಜ್ಯದ ಗೌರವ, ಸ್ವಾಭಿಮಾನಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದೆ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಬೇಕು ಎಂದು ನೂತನವಾಗಿ ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ತಂಡದವರು ಮುಖ್ಯಮಂತ್ರಿ ಹಾಗೂ ನನ್ನನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರದ ಸಹಕಾರ ಕೋರಿದ್ದಾರೆ. ಐಪಿಎಲ್ ಸೇರಿದಂತೆ ಯಾವುದೇ ಪಂದ್ಯಗಳನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದ್ದೇನೆ. ನೂತನ ಸ್ಟೇಡಿಯಂಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.